HOSANAGARA ; ಶಿವಮೊಗ್ಗ ಡಿವಿಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಎರಡು ಚಿನ್ನ, ನಾಲ್ಕು ರಜತ ಹಾಗೂ 2 ಕಂಚಿನ ಪದಕಗಳನ್ನು ಬಾಚಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಕ್ರೀಡಾಕೂಟದಲ್ಲಿ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿನಿಯರು ನಾವು ಯಾರಿಗೇನು ಕಮ್ಮಿ ಇಲ್ಲ ಎಂದು ಬೀಗುವ ಮೂಲಕ ದಾಖಲೆಯ ಪ್ರದರ್ಶನ ನೀಡಿದ್ದು ಕು. ಪುಷ್ಪ 10 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದರೆ 20 ಸಾವಿರ ಮೀ. ನಡಿಗೆ ಸ್ಪರ್ಧೆಯಲ್ಲಿ ಮಂದಾರ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೆ ಏರಿಸಿದರು.
ಸಿಂಧು 20 ಸಾವಿರ ಮೀ. ನಡಿಗೆ ಸ್ಪರ್ಧೆಯಲ್ಲಿ ಹಾಗೂ 21 ಸಾವಿರ ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು.
ಪುರುಷರ ವಿಭಾಗದ 21 ಸಾವಿರ ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ಶಶಾಂಕ್ ದ್ವಿತೀಯ ಸ್ಥಾನ ಗಳಿಸಿ ರಜತ ಪದಕ ಪಡೆದರೆ, ಅರ್ಷಿತಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಜತ ಪದಕ ತಮ್ಮದಾಗಿಸಿಕೊಂಡಿದ್ದು, 20 ಸಾವಿರ ಮೀ. ನಡಿಗೆ ಸ್ಪರ್ಧೆಯಲ್ಲಿ ಉಲ್ಲಾಸ್ ತೃತೀಯ ಸ್ಥಾನವನ್ನು ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಶಬರೀಶ್ ತೃತೀಯ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಈ ವಿದ್ಯಾರ್ಥಿಗಳ ಸಾಧನೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಕಾಲೇಜು ಪ್ರಾಂಶುಪಾಲರು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.