KOPPA ; ಮನೆಯಂಗಳದಲ್ಲಿ ಆಟವಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಧ್ಯಪ್ರದೇಶದ ನಝೀರಾಬಾದ್ ನಿವಾಸಿಗಳಾದ ಸುನೀತಾ ಮತ್ತು ಅರ್ಜುನ್ ಸಿಂಗ್ ದಂಪತಿಯ ಪುತ್ರಿಯರಾದ ಸೀಮಾ (6) ಮತ್ತು ರಾಧಿಕಾ (2) ಮೃತಪಟ್ಟ ಮಕ್ಕಳು. ಅರ್ಜುನ್ ಸಿಂಗ್ ನಝೀರಾಬಾದ್ ನಲ್ಲೇ ವಾಸವಿದ್ದು, ಮೂವರು ಮಕ್ಕಳೊಂದಿಗೆ ಸುನೀತಾ ಬಾಯಿ ಕೂಲಿ ಕೆಲಸ ಅರಸಿ ಬಂದವರು ಕೊಪ್ಪದಲ್ಲಿ ಎಸ್ಟೇಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕಾರ್ಮಿಕರಿಗಾಗಿ ನಿರ್ಮಿಸಿರುವ ಲೈನ್ ಮನೆಯಲ್ಲಿ ವಾಸವಿದ್ದರು. ಸುನೀತಾ ತನ್ನ 13 ವರ್ಷದ ಹಿರಿಯ ಪುತ್ರ ಬೀರ್ಸಿಂಗ್ ಜೊತೆ ಮಂಗಳವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ವಾಪಸ್ಸಾದಾಗ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು.
ಬಳಿಕ ಇತರ ಕಾರ್ಮಿಕರ ಜೊತೆಗೂಡಿ ಹುಡುಕಾಡಿದಾಗ ರಾತ್ರಿ 8 ಗಂಟೆ ವೇಳೆ ಮನೆಯಿಂದ 100 ಮೀಟರ್ ದೂರದಲ್ಲಿರುವ ಬಾವಿಯೊಂದರಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಭೂ ಮಟ್ಟದಿಂದ ಬಾವಿ ಕೇವಲ ಮೂರ್ನಾಲ್ಕು ಅಡಿಯಷ್ಟು ನೀರಿನ ಮಟ್ಟ ಇದ್ದು ಕೈಗೆ ತಾಗುವಂತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು.
ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.