HOSANAGARA ; ಇತ್ತೀಚಿನ ಸಹಕಾರಿ ಸಂಘದ ಚುನಾವಣೆಗೆ ಸಂಬಂಧಿಸಿದ ಹಳೇ ವೈಷಮ್ಯಕ್ಕೆ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟವು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಾಲೂಕು ಪಂಚಾಯತಿ ಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ನಿಟ್ಟೂರು ಗ್ರಾಮ ಪಂಚಾಯತಿ ಕಾಂಗ್ರೆಸ್ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವರ ಮೇಲೆ ಬಿಜೆಪಿ ಕಾರ್ಯಕರ್ತ ದೇವರಾಜ್ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ನಿನ್ನೆ ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಗ್ರಾಮ ಪಂಚಾಯತಿ ಒಕ್ಕೂಟದ ಸದಸ್ಯರು ಬುಧವಾರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಅವರನ್ನು ಭೇಟಿ ಮಾಡಿ ಆರೋಪಿ ದೇವರಾಜ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಹೆಚ್. ಬಿ.ಚಿದಂಬರ, ಮಾರುತಿಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಿಕಾ ಕೃಷ್ಣಪ್ಪ, ನಿಟ್ಟೂರು ಸುಬ್ರಹ್ಮಣ್ಯ ಮೊದಲಾದವರು ಇದ್ದರು.