ತೀರ್ಥಹಳ್ಳಿ ; ಧ್ಯಾನ ಮತ್ತು ಸ್ವಾದ್ಯಾಯದಿಂದ ಅಗ್ರಪಂಕ್ತಿಯ ಆಚಾರ್ಯರಾಗಿ ಮೇರುಧರ್ಮ ಕೃತಿಗಳನ್ನು ರಚಿಸಿದ ಆಚಾರ್ಯ ಶ್ರೀ ಕುಂದಕುಂದಾಚಾರ್ಯರ ಕರ್ಮಭೂಮಿ ಕುಂದಾದ್ರಿ ಶ್ರೀಕ್ಷೇತ್ರವು ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ. ಇದು ಜೈನ ಧರ್ಮೀಯರಿಗೆ ಸೀಮಿತವಾಗಿರದೇ ಸರ್ವ ಧರ್ಮೀಯರಿಗೂ ಆಧ್ಯಾತ್ಮಿಕ ಸಿಂಚನಗೆರೆಯುವ ಪ್ರಶಸ್ತ ಪುಣ್ಯಧಾಮವಾಗಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಕುಂದಾದ್ರಿ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಚಾರ್ಯ ಕುಂದಕುಂದಾಚಾರ್ಯರ ಪರಮ ಪಾವನ ಚರಣ ಪಾದುಕೆಗಳಿಗೆ ಜೈನಾಗಮ ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿ ಪ್ರವಚನದಲ್ಲಿ ತಿಳಿಸಿದರು.
ಸರ್ವಜೀವಿಗಳಲ್ಲಿ ಜೀವಕಾರುಣ್ಯಭಾವವನ್ನು ಹೊಂದಿ, ಧ್ಯಾನಸ್ಥರಾಗಿ ಸ್ವಾದ್ಯಾಯದ ಮೂಲಕ ಜ್ಞಾನಗ್ರಹಣ ಮಾಡುವ ಅಪೂರ್ವ ತಾಣವಾಗಿ ಕುಂದಾದ್ರಿ ಬೆಟ್ಟವು ಎರಡು ಸಾವಿರ ವರ್ಷಗಳ ಪೂರ್ವ ಇರಿಹಾಸ ಹೊಂದಿದೆ ಎಂದು ಸ್ವಸ್ತಿಶ್ರೀಗಳವರು ವಿವರಿಸುತ್ತಾ ಮಕರ ಸಂಕ್ರಮಣದ ಪರ್ವಾಚರಣೆಯ ಸುದಿನದಂದು ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಾತ್ರಿ ದೀಪೋತ್ಸವ ಆಚರಣೆಗಳು ಪೂರ್ವಪರಂಪರೆಯಲ್ಲಿ ಭಕ್ತರು ಪಾಲ್ಗೊಂಡು, ಇಷ್ಟಾರ್ಥ ಪ್ರಾರ್ಥನೆ ಸಲ್ಲಿಸಿ, ಉತ್ತರಾಯಣ ಮಾಸಗಳಲ್ಲಿ ಜೀವನೋತ್ಸಾಹ ಸ್ಪುರಿಸಲಿ ಎಂದು ಆಶೀರ್ವದಿಸಿದರು.
ಮಲೆನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಧಾರ್ಮಿಕ ಕ್ಷೇತ್ರವಾಗಿ ಭಕ್ತರಿಗೆ ಉತ್ತಮ ಧರ್ಮತತ್ವಗಳನ್ನು ಪ್ರಸಾರ ಮಾಡುವಂತಾಗಲಿ. ಸಮರ್ಪಕ ಸವಲತ್ತುಗಳನ್ನು ರಸ್ತೆ ಅಭಿವೃದ್ಧಿ ಮಾಡಲು ರಾಜ್ಯ ಸರಕಾರದಿಂದ ಈಗಾಗಲೇ ಅನುದಾನಕ್ಕಾಗಿ ಯೋಜನೆ ಸಿದ್ಧಗೊಂಡು ಅನುಷ್ಠಾನವಾಗಿದೆ ಎಂದರು.
ಶ್ರೀಕ್ಷೇತ್ರದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಕಲಿಕುಂಡ ಯಂತ್ರಾರಾಧನೆ, ಶ್ರೀ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ, ಶ್ರೀ ಪದ್ಮಾವತಿ ಅಮ್ಮನವರ ಪೋಡಶೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿತು. ರಾತ್ರಿ ವಾರ್ಷಿಕ ಲಕ್ಷ ದೀಪೋತ್ಸವದಲ್ಲಿ ಭಕ್ತರು ಪಾಲ್ಗೊಂಡರು.
ಮಂಗಳೂರಿನ ಮಕ್ಕಿಮನೆ ಕಲಾವೃಂದ ಬಳಗದ ಸಂಯೋಜನೆಯಲ್ಲಿ ಮಲೆನಾಡು, ದಕ್ಷಿಣಕನ್ನಡ ಜಿಲ್ಲೆ ಮತ್ತು ಹೊಂಬುಜದ ಶ್ರಾವಕ-ಶ್ರಾವಿಕೆಯರಿಂದ ಜಿನಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ಕ್ಷೇತ್ರದ ಪುರೋಹಿತ ಶಾಂತಿನಾಥ ಇಂದ್ರ, ಭರತ ಇಂದ್ರ, ಸಹಪುರೋಹಿತರಿಂದ ಪೂಜಾ ವಿಧಿ-ವಿಧಾನಗಳು ಸಾಂಗವಾಗಿ ಜರುಗಿದವು.
ಕುಂದಾದ್ರಿ ಪರಿಸರದಲ್ಲಿ ಶ್ರೀತಾಳೆ ವೃಕ್ಷ ಪೋಷಣೆ
“ಕ್ಷಿತಿರುಹ ನೋಂಪಿ” ಪ್ರಕೃತಿಯಲ್ಲಿ ಸಸ್ಯ ಜೀವ ಪ್ರಸಾರ
ತೀರ್ಥಹಳ್ಳಿ ; ಪರಂಪರೆಯಲ್ಲಿ ಜೈನ ಮಹಿಳೆ ಸಿರಿದೇವಿ ರೂಪಿಸಿದ ‘ಕ್ಷಿತಿರೂಹ’ ನೋಂಪಿಯ ಉಲ್ಲೇಖವಿದೆ. ಮಳೆ ಬರಿಸುವ ಕಾಡು, ಜೈವಿಕ ವಲಯ ನಿರ್ಮಾಣದ ಸತ್ಕಾರ್ಯವನ್ನು ದಾಖಲಿಸಲಾಗಿದೆ ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಕುಂದಾದ್ರಿ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ತಿಳಿಸಿದರು.
ಅವರು ತಾಡೋಲೆ ಹಸ್ತಪ್ರತಿಗಳನ್ನು ತಯಾರಿಸುತ್ತಿದ್ದ ಕಾಲಘಟ್ಟದಲ್ಲಿ ಬಳಸುತ್ತಿದ್ದ ‘ತಾಳೆಗರಿ’ ಕುರಿತು ಅವಲೋಕಿಸಿ ಶ್ರೀತಾಳೆ ವೃಕ್ಷದಿಂದ ತಾಳೆಗರಿ ಲಿಪಿಕಾರರಿಗೆ ಲಭ್ಯವಾಗುತ್ತಿತ್ತು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ವಿದ್ವಾಂಸ ಡಾ. ಎಸ್.ಎ. ಕೃಷ್ಣಯ್ಯನವರು ಪ್ರಾಚ್ಯ ಸಂಚಯ ಸಂಶೋಧನೆ ಕೇಂದ್ರದ ನಿರ್ದೇಶಕರು ಮತ್ತು ಬಳಗದವರು ಶ್ರೀತಾಳೆ ವೃಕ್ಷದ ಉಪಯೋಗ, ಆರೋಗ್ಯ ರಕ್ಷಣೆಗೆ ಶ್ರೀತಾಳೆಮರದ ತಿರುಳಿನ ಹಿಟ್ಟು ಅತೀ ಅಗತ್ಯವಾಗಿದೆ ಎಂದು ವಿವರಿಸಿದರು.
ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರಿಗೆ ಶ್ರೀತಾಳೆ ವೃಕ್ಷದ ಬೀಜಗಳನ್ನು ಸಮರ್ಪಿಸಿದರು. ಶ್ರೀತಾಳೆ ಗಿಡಗಳನ್ನು ನೀಡಿ, ಭಕ್ತವೃಂದದವರು ಶ್ರೀತಾಳೆ ಬೀಜವನ್ನು ಶ್ರೀಗಳವರಿಂದ ಪಡೆದು ‘ಕ್ಷಿತಿರೂಹ’ ನೋಂಪಿಯಂತೆ ಗಿಡವನ್ನು ಬೆಳೆಸಿ, ರಕ್ಷಿಸಿ ಎಂದು ನುಡಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ಪರಿಸರ ಪ್ರಕೃತಿಯ ಅಪರೂಪ ವೃಕ್ಷಗಳನ್ನು ಔಷಧಿಯಾಗಿ, ವನ್ಯ ಪ್ರಾಣಿ-ಪಕ್ಷಿಗಳಿಗೆ ಆಶಯ-ಆಹಾರವಾಗಿ ಬೆಳೆಸುವುದು ಭಾರತೀಯ ಸನಾತನ ಧರ್ಮ ಪರಂಪರೆಯ ಭಾಗವಾಗಿದೆ ಎಂದು ಡಾ. ಎಸ್.ಎ. ಕೃಷ್ಣಯ್ಯನವರ ಶ್ರೀತಾಳೆ ವೃಕ್ಷಗಳ ಬೀಜಗಳನ್ನು ಬಿತ್ತೋಣವೆಂದರು.
ಪುಣ್ಯಕ್ಷೇತ್ರವಾಗಿರುವ ಕುಂದಾದ್ರಿಯಲ್ಲಿ ಶ್ರೀಗಳವರ ಆಶೀರ್ವಾದದಿಂದ ವಿತರಿಸುತ್ತಿರುವುದು ಶ್ಲಾಘನೀಯವೆಂದರು. ಕುಂದಾದ್ರಿ ಬೆಟ್ಟದ ಅಭಿವೃದ್ಧಿಗಾಗಿ ಪೂಜ್ಯ ಸ್ವಾಮೀಜಿಗಳವರ ಮಾರ್ಗದರ್ಶನ ಯೋಜನೆಗಳನ್ನು ರೂಪಿಸಲಾಗಿದೆ ಎಂಬ ವಿಚಾರ ತಿಳಿಸುತ್ತಾ, ಆಧ್ಯಾತ್ಮಿಕ ಪುಣ್ಯಸ್ಥಳವಾಗಿ ಸ್ಥಳೀಯರೂ ಪಾಲ್ಗೊಂಡು ಸಂರಕ್ಷಿಸೋಣ ಎಂದರು.
ಹಿರಿಯ ಆಯುರ್ವೇದ ತಜ್ಞ ಡಾ. ಜೀವಂಧರ ಜೈನ್, ಶಿವಮೊಗ್ಗ ಜೈನ ಸಮಾಜದ ರತ್ನಕುಮಾರ್ ಜೈನ್, ಕೆ.ಜೆ.ಎ. ನಿರ್ದೇಶಕ ಯಶೋಧರ ಜೈನ್, ಡಾ. ಎಸ್.ಎನ್. ಅಮೃತಮಲ್ಲ, ಡಾ. ನಿರಂಜನ್ ಶೃಂಗೇರಿ, ಕೆ.ಸಿ. ಧರಣೇಂದ್ರಯ್ಯ, ಜಯಶ್ರೀ ಹೊರನಾಡು ಇನ್ನಿತರರು ಉಪಸ್ಥಿತರಿದ್ದರು.