ರಿಪ್ಪನ್ಪೇಟೆ ; ಸರ್ಕಾರವೇ ಎಲ್ಲವನ್ನು ಮಾಡುತ್ತದೆಂಬ ಉದ್ದೇಶದಿಂದಾಗಿ ಮತದಾರರು ತಮ್ಮ ಮೂಲಭೂತ ಸೌಲಭ್ಯಗಳನ್ನು ಈಡೇರಿಸುತ್ತಾರೆಂಬ ಅಪಾರ ನಂಬಿಕೆ ಮೇಲೆ ಮತ ಹಾಕಿ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದು ಜನರ ಕರ್ತವ್ಯ.
ಇಲ್ಲಿನ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಟ್ಟನಕೆರೆ-ಕಾರಗೋಡು ಗ್ರಾಮ ಮಜರೆ ಗ್ರಾಮಗಳಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲ ಬಂದರೆ ಸಾಕು ಕೆಸರು ಗದ್ದೆಯಂತಾಗಿ ವಾಹನ ಸವಾರರ ಓಡಾಡ ದುಸ್ಥರವಾಗುತ್ತದೆ. ಹಾಗೆ ಬೇಸಿಗೆಯಲ್ಲಿ ದೂಳುಮಯ ರಸ್ತೆಯಾಗಿ ಜನಸಾಮಾನ್ಯರ ಓಡಾಟಕ್ಕೆ ತುಂಬಾ ಅನಾನುಕೂಲವಾಗುತ್ತಿದ್ದು ಈ ಬಗ್ಗೆ ಇಲ್ಲಿನ ನಿವಾಸಿಗಳು ಸಂಬಂಧಿಸಿದ ಗ್ರಾಮಾಡಳಿತದ ಗಮನಕ್ಕೆ ತರಲಾದರೂ ಕೂಡಾ ರಸ್ತೆ ನಿರ್ಮಾಣದ ಕಡೆ ನಿರ್ಲಕ್ಷ್ಯ ವಹಿಸುತ್ತಾ ಇದ್ದು ಇದರಿಂದ ಸಿಡಿಮಿಡಿಗೊಂಡ ಮಜರೆ ಗ್ರಾಮದ ನಿವಾಸಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಯಂತ್ರ ಬಳಸಿಕೊಂಡು ತಾವುಗಳೇ ಯಾರನ್ನು ಅವಲಂಬಿಸಿದೆ ರಸ್ತೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಒಂದು ಕಡೆಯಲ್ಲಿ ಕೂದಲೆಳೆ ಅಂತರದಲ್ಲಿರುವ ಸಾಗರ ವಿಧಾನಸಭಾ ಕ್ಷೇತ್ರದ ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಟ್ಟನಕೆರೆ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕಾರಗೋಡು ಗ್ರಾಮ ಈ ಎರಡು ಕ್ಷೇತ್ರದ ಜನಪ್ರತಿನಿಧಿಗಳ ಗಡಿಯಂಚಿನಲ್ಲಿ ಬರುವ ಈ ಎರಡು ಗ್ರಾಮಗಳಲ್ಲಿನ ಜನರಿಗೆ ಮೂಲಭೂತ ಸೌಲಭ್ಯಗಳು ದೊರೆಯದೆ ನಿರ್ಲಕ್ಷ್ಯಕ್ಕೆ ಕಾರಣವೆನ್ನಲಾಗಿದೆ.
ಒಟ್ಟಾರೆಯಾಗಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಳ್ಳಿ ಸಂಪರ್ಕದ ರಸ್ತೆಗಳಿಗೆ ಮುಕ್ತಿಯಿಲ್ಲದಂತಾಗಿದ್ದು ಸಾಕಷ್ಟು ಬಾರಿ ಇಲ್ಲಿನ ನಿವಾಸಿಗಳು ಸ್ಥಳೀಯಾಡಳಿತದಿಂದ ಹಿಡಿದು ಶಾಸಕರ ಮನೆ ಕದ ತಟ್ಟಿದರೂ ಕೂಡಾ ಸಮರ್ಪಕ ರಸ್ತೆ ಮಾಡುವತ್ತ ಗಮನಹರಿಸದಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಗ್ರಾಮಸ್ಥರೇ ತಮ್ಮ ಊರಿಗೆ ಕೃಷಿ ಚಟುವಟಿಕೆಗೆ, ಶಾಲಾ-ಕಾಲೇಜ್ ತೆರಳುವ ವಿದ್ಯಾರ್ಥಿಗಳ ಸಂಪರ್ಕ ರಸ್ತೆಯನ್ನು ತಮ್ಮ ಸ್ವಂತ ಬಂಡವಾಳದೊಂದಿಗೆ ಜೆಸಿಬಿ ಯಂತ್ರದ ಮೂಲಕ ನಿರ್ಮಿಸಿಕೊಳ್ಳುತ್ತಿರುವುದನ್ನು ಕಂಡ ಸಾರ್ವಜನಿಕರು ಪ್ರಶಂಸೆಗೆ ಕಾರಣವಾಗಿದೆ.
ಸರ್ಕಾರದ ಒಂದು ನಯಾ ಪೈಸೆಯ ಆನುದಾನವನ್ನು ಬೇಡದೆ ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಸಾರ್ವಜನಿಕರ ಮುಚ್ಚುಗೆಗೆ ಕಾರಣ.