ಮೂಡಿಗೆರೆ ; ಕಾಫಿ ತೋಟದಲ್ಲಿ ಬೇಟೆಗಾರರು ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ನಡೆದಿದೆ.
ಕಾಡುಹಂದಿ ಬೇಟೆಗೆ ಬೇಟೆಗಾರರು ಹಾಕಿದ್ದ ಉರುಳಿಗೆ ಫೆ.20ರ ಗುರುವಾರ ರಾತ್ರಿಯೇ ಚಿರತೆ ಸಿಲುಕಿದೆ. ಶುಕ್ರವಾರ ಬೆಳಿಗ್ಗೆ ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ರಕ್ಷಿಸಲು ಪ್ರಯತ್ನಿಸಿದರು.
ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಿ ರಕ್ಷಣೆ ಮಾಡಲು ಮುಂದಾದರು. ಅಷ್ಟರಲ್ಲಿ ಚಿರತೆ ಉಸಿರಾಟ ನಿಲ್ಲಿಸಿದ್ದು, ಮೃತಪಟ್ಟಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದರು. ಉರುಳು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಸೊಂಟಕ್ಕೆ ಇಳಿದಿದ್ದ ಉರುಳು ಮತ್ತಷ್ಟು ಬಿಗಿಯಾಗಿ ಚಿರತೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾಡು ಹಂದಿಗೆ ಹಾಕಿರುವ ಉರುಳಿಗೆ ಚಿರತೆ ಸಿಲುಕಿರುವ ಸಾಧ್ಯತೆ ಇದೆ. ಮೊದಲಿಗೆ ಕಾಫಿ ತೋಟದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಮರಣೋತ್ತರ ಪರೀಕ್ಷೆ ಬಳಿಕ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.