ರಿಪ್ಪನ್‌ಪೇಟೆ ; ಹುಂಚ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಸ.ಕಿ.ಪ್ರಾ. ಶಾಲೆ ಹಡ್ಲುಬೈಲು ಇಲ್ಲಿ ಅತ್ಯಂತ ವಿಭಿನ್ನ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿತ್ತು.

ಕಲಿಕಾ ಹಬ್ಬದ ವೇದಿಕೆಯನ್ನು ಹಳ್ಳಿಯ ಪರಿಸರದಂತೆ ಸಜ್ಜುಗೊಳಿಸಿದ್ದು ವಿಶೇಷವಾಗಿತ್ತು. ಮಕ್ಕಳ ಭಾವಚಿತ್ರ, ಆಕರ್ಷಕ ಗೊಂಬೆಗಳು, ಒಗಟುಗಳು ಬಣ್ಣಬಣ್ಣದ ಛತ್ರಿಗಳೊಂದಿಗೆ ಅಲಂಕೃತಗೊಂಡಿದ್ದ ಶಾಲಾ ಹಾದಿ ಎಲ್ಲರ ಮನಸೂರೆಗೊಂಡಿತು.

ಹಸಿರಿನಿಂದ ಕಂಗೊಳಿಸುತ್ತಿದ್ದ ಶಾಲೆ, ಕಲಿಕಾ ಕುಟೀರ, ಬಾಲವನ ಮಕ್ಕಳ ಕಲರವದಲ್ಲಿ ತುಂಬಿತ್ತು. ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷೆ ಸುಮಂಗಲ ದೇವರಾಜ್ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಿಇಒ ಹೆಚ್.ಆರ್. ಕೃಷ್ಣಮೂರ್ತಿ, ಶಾಲೆಯ ವಾತಾವರಣ, ಶಿಕ್ಷಕರ ಬದ್ಧತೆ ಪ್ರಶಂಸಿಸಿ, ಕಲಿಕಾ ಹಬ್ಬ ಇಲ್ಲಿ ಅತ್ಯಂತ ಫಲಪ್ರದವಾಗಿ ಮೂಡಿಬಂದಿದೆ ಎಂದರು.

ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಕಲಿಕೆ ಎನ್ನುವುದು ನಿರಂತರದ ಗುಣ ಹೊಂದಿದೆ. ಇದು ವೃತ್ತಿ, ಜ್ಞಾನ ಸೇರಿದಂತೆ ಮಕ್ಕಳಲ್ಲಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ಅದೇ ರೀತಿ ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ ಎಂದು ತಿಳಿಸಿದರು.

ಕಿರಿಯ ಪ್ರಾಥಮಿಕ ಶಾಲೆಯಾಗಿದ್ದರು ಇಂತಹ ವಿಶಿಷ್ಟ ಕಾರ್ಯಕ್ರಮ ಸಂಘಟಿಸಿ ಎಲ್ಲರ ಮನಗೆದ್ದ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ಸಹ ಶಿಕ್ಷಕಿ ಕಲಾವತಿ, ಪೋಷಕರು, ಗ್ರಾಮಸ್ಥರ ಅವಿರತ ಶ್ರಮವನ್ನು ನೆರೆದಿದ್ದ ಎಲ್ಲರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಕರಿಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ತೋಟದಕಟ್ಟು, ಸರೋಜ ನವೀನ್, ಶ್ರೀಧರ್, ಯಶಸ್ವತಿ ಜೈನ್, ಸರ್ಕಾರಿ ನೌಕರ ಸಂಘದ ಸದಸ್ಯ ಬಸವಣ್ಯಪ್ಪ, ಶಿವಪ್ಪ, ಹುಂಚ ಕ್ಲಸ್ಟರ್ ಸಿ.ಆರ್.ಪಿ ದೀಪಾ ಎಂ, ಶಿಕ್ಷಣಾಸಕ್ತ ಶ್ರೀಧರಮೂರ್ತಿ ಕೆ.ಎಸ್, ಹುಂಚ ಕ್ಲಸ್ಟರ್ ನ ಎಲ್ಲಾ ಶಿಕ್ಷಕರುಗಳು, ಎಸ್. ಡಿ.ಎಂ.ಸಿ ಅಧ್ಯಕ್ಷರುಗಳು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಊರಿನ ಎಲ್ಲಾ ಶಾಲಾಭಿಮಾನಿಗಳು ಭಾಗವಹಿಸಿದ್ದರು.