ಹೊಸನಗರ ; ಇತ್ತೀಚಿನ ಹವಾಮಾನ ವೈಪರೀತ್ಯಗಳಿಂದ ಮಲೆನಾಡು ಭಾಗದ ರೈತಾಪಿ ವರ್ಗವು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಸಾಂಬಾರ ಬೆಳೆಗಳ ಇಳುವರಿ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ರೈತಾಪಿ ವರ್ಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅಡಿಕೆ ಬೆಳೆ ಮಾರಕ ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ. ಈ ಎಲ್ಲಾ ಕಾರಣದಿಂದ ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಇದೇ ಮಾರ್ಚ್ 10ರ ಸೋಮವಾರ ಬೆಳಗ್ಗೆ 10-30ಕ್ಕೆ ಅಡಿಕೆ ಕೃಷಿ ಕುರಿತಾದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ನಿರ್ದೇಶಕ ಹೆಚ್.ಎಂ. ರಾಘವೇಂದ್ರ, ಮ್ಯಾಮ್ ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ನಿರ್ದೇಶಕ ಧರ್ಮೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಅಪ್ಕೋಸ್ ನಿರ್ದೇಶಕ ಹೆಚ್.ಬಿ. ಕಲ್ಯಾಣಪ್ಪ ಗೌಡ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೊಂದಿಗೆ ಅಡಿಕೆ ಬೆಳೆಯ ಸಮಸ್ಯೆ ಕುರಿತಂತೆ ಚರ್ಚೆ ನಡೆಲಿದ್ದಾರೆ.
ತಾಲೂಕಿನ ಸಮಸ್ತ ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕೃಷಿ ಚಿಂತನೆ, ವಿಜ್ಞಾನಿಗಳ ಸಲಹೆ ಪಡೆದು ಚರ್ಚಾಕೂಟದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಅವರು ಕೋರಿದ್ದಾರೆ.