ಹೊಸನಗರ ; ತಾಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿದ್ದು, ಹಲವಾರು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕೂಗು ಗ್ರಾಮಸ್ಥರಲ್ಲಿ ಕೇಳಿಬರುತ್ತಿದೆ. ಈ ಹಿಂದಿನ ಅಧ್ಯಕ್ಷೀಯ ಆಡಳಿತ ಅವಧಿಯಲ್ಲಿ ಪಂಚಾಯತಿಗೆ ಸೇರಿದೆ ಎನ್ನಲಾದ ಭಾರೀ ಅನಿಯಮಿತ ಹಣಕಾಸು ವ್ಯವಹಾರ, ಕಳಪೆ ಕಾಮಗಾರಿ ಮತ್ತು ಅಕ್ರಮ ಖರ್ಚುಗಳು ಬೆಳಕಿಗೆ ಬಂದಿವೆ.
ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯ ಆರೋಪ ;
ಗ್ರಾಮ ಪಂಚಾಯತಿಯ ಪ್ರಗತಿ ಯೋಜನೆಯಲ್ಲಿ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಿಟ್ಟಿದ್ದ 1.5 ಲಕ್ಷ ರೂ.ಗಳಿಗೂ ಅಧಿಕ ಅನುದಾನವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಬೇಕಾಬಿಟ್ಟಿ ವ್ಯಯ ಮಾಡಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಲು ಮೀಸಲಿಟ್ಟಿ ಈ ಅನುದಾನವನ್ನು ನಕಲಿ ಬಿಲ್ ತಯಾರಿಸಿ ಮೂಲಕ ಖರ್ಚು ಮಾಡಲಾಗಿದೆ. ಈ ಕುರಿತು ಸಂಬಂಧಪಟ್ಟವರು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಫಲಿತಾಂಶ ಮಾತ್ರ ಶೂನ್ಯವೇ ಆಗಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೇವಲ ಹೆಸರಿಗೆ ಮಾತ್ರವೇ ಎಲ್ಇಡಿ ಲೈಟ್ ಸೇವೆೆ ;
ಇಲ್ಲಿನ ಗಂಗನಕೊಪ್ಪ ಗ್ರಾಮದ ಎಸ್ಸಿ-ಎಸ್ಟಿ ಕಾಲೋನಿ, ಅರಳಿಕೊಪ್ಪ, ಮಾವಿನಕೊಪ್ಪ, ಕಳೂರು, ಗೇರುಪುರ ಸೇರಿದಂತೆ ವಿವಿಧೆಡೆ ಎಲ್ಇಡಿ ಬೀದಿ ದೀಪ ಅಳವಡಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ. 1.5 ಲಕ್ಷ ರೂ. ಮೀಸಲಿಟ್ಟ ಅನುದಾನಕ್ಕೆ ಅಕ್ರಮ ಬಿಲ್ ತಯಾರಿಸಿ ಎಳ್ಳು-ನೀರು ಬಿಟ್ಟಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಈಗ ಸದ್ದು ಮಾಡುತ್ತಿದೆ.
ಜಲಜೀವನ್ ಮಿಷನ್ ಕಾಮಗಾರಿ ಕಳಪೆ ;
ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಗೊಂಡು ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಕಾಮಗಾರಿಯಲ್ಲಿ ಅನುಷ್ಠಾನದಲ್ಲಿ ವಿಳಂಬ, ಕಾಮಗಾರಿಯ ಗುಣಮಟ್ಟ ಸಹ ಕಳಪೆಯಿಂದ ಕೂಡಿರುವುದು ಗ್ರಾಮಸ್ಥರಿಗೆ ಸೂಕ್ತ ಸಮಯದಲ್ಲಿ ಶುದ್ದ ನೀರು ಒದಗಿಸುವ ಯೋಜನೆಯ ಮೂಲ ಉದ್ದೇಶಕ್ಕೆ ಹಿನ್ನಡೆ ಉಂಟು ಮಾಡಿದೆ. ಇದರಿಂದ ಗ್ರಾಮದಲ್ಲಿ ಜಲಕ್ಷಾಮ ಉಚಿಟಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದರೂ ತನಿಖಾ ವರದಿ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ವರದಿ ಇನ್ನೂ ಕೈ ಸೇರಿಲ್ಲವಂತೆ.
ಶೀಘ್ರ ತನಿಖಾ ವರದಿ ಬಿಡುಗಡೆಗೆ ಗ್ರಾಮಸ್ಥರ ಆಗ್ರಹ ;
ತಪ್ಪಿದಲ್ಲಿ ಹೋರಾಟದ ಎಚ್ಚರಿಕೆ
ಈಗಾಗಲೇ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗು ತಾಲೂಕು ಪಂಚಾಯತಿ ಇಒ ಅವರಿಗೆ ಪತ್ರದ ಮೂಲಕ ದೂರು ಸಲ್ಲಿಸಲಾಗಿದೆ. ಇತ್ತೀಚೆಗೆ ಜಿಲ್ಲಾ ಮಟ್ಟದ ಅಂತರೀಕ ಲೆಕ್ಕ ಪರಿಶೋಧನಾ ಸಮಿತಿ ತನಿಖೆ ಕೈಗೊಂಡರೂ, ತನಿಖಾ ವರದಿ ಬಿಡುಗಡೆ ಮಾಡದೇ ರಹಸ್ಯವಾಗಿ ಇಟ್ಟುಕೊಂಡಿರುವ ಹಿನ್ನಲೆ ಏನು? ಶೀಘ್ರ ತನಿಖಾ ವರದಿ ಬಿಡುಗಡೆ ಮಾಡಿ ತಪ್ಪಿತಸ್ತರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ಅಕ್ರಮದ ಹಿಂದೆ ಯಾರಿದ್ದಾರೆ ?
ಆಡಳಿತಾತ್ಮಕ ಅಕ್ರಮ, ಹಣಕಾಸು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಘಟನೆಯ ಹಿಂದೆ ಯಾರಿದ್ದಾರೆ? ಕಂದಾಯ ಹಣ ದುರುಪಯೋಗ ಪಡಿಸಿಕೊಂಡ ಹಿನ್ನಲೆ ಗ್ರಾಮಸ್ಥರಿಗೆ ತಿಳಿಯಬೇಕಿದೆ. ಈ ಕೂಡಲೇ, ಈ ಎಲ್ಲಾ ಅಕ್ರಮಗಳ ತನಿಖಾ ವರದಿ ಬಿಡುಗಡೆಗೊಳಿಸಬೇಕು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು. ಗ್ರಾಮಸ್ಥರ ಹಿತದೃಷ್ಠಿಯಿಂದ ಹಗರಣ ಬಯಲಿಗೆಳಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಅಹವಾಲು ಆಗಿದೆ.