ರಿಪ್ಪನ್‌ಪೇಟೆ ; ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಡೋಜರ್‌ಗುಡ್ಡ ಸರ್ಕಾರಿ ಕಿರಿಯ ಶಾಲೆಯಲ್ಲಿ ಶಾರದಾ ಪೂಜೆ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.
ಗ್ರಾ.ಪಂ. ಸದಸ್ಯ ಯೋಗೇಂದ್ರಪ್ಪ ಮಾತನಾಡಿ, ಮೌಲ್ಯಯುತ ಶಿಕ್ಷಣ ಪ್ರತಿಭೆಯ ಅನಾವರಣ ಎಂಬ ಧ್ಯೇಯ ವಾಕ್ಯದಂತೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಶಾಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಹೇಳಿ, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಿದ್ಧರಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಕಿವಿಮಾತು ಹೇಳಿದರು.

ಕೋಟೆತಾರಿಗ ಕ್ಲಸ್ಟರ್ ಸಿ.ಆರ್.ಪಿ. ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಹೆಚ್ಚಿನ ಅಂಕಗಳಿಸಿ, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಹೇಳಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಮೌಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಾತ್ರ ಮಗು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ 5ನೇ ತರಗತಿಯ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕೋಡೂರು ಕ್ಲಸ್ಟರ್ ಸಿ.ಆರ್.ಪಿ. ಪ್ರದೀಪ್, ಮುಖ್ಯಶಿಕ್ಷಕ ಚಿರಂಜೀವಿ, ಸಹ ಶಿಕ್ಷಕಿ ಥೆರೆಸಾ ಎಲಿಜಬೆತ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಸುತ್ತಮುತ್ತಲಿನ ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು ಹಾಜರಿದ್ದರು.