ಜಾತಿ ಗಣತಿ ವರದಿಗೆ ಈಗ ಜೈನ ಸಮಾಜದ ವಿರೋಧ | ಜೈನರ ಸಂಖ್ಯೆ ಕಡಿಮೆ ಇದೆ, ವರದಿ ಒಪ್ಪಲ್ಲ ; ಹೊಂಬುಜ ಶ್ರೀಗಳು

Written by malnadtimes.com

Published on:

ರಿಪ್ಪನ್‌ಪೇಟೆ ; ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯ ವರದಿಯಲ್ಲಿ ಜೈನ ಸಮಾಜದ ಜನಸಂಖ್ಯೆ 2011ನೇ ಸಾಲಿಗಿಂತ ಕಡಿಮೆಯಾಗಿರುವುದು ತಿಳಿದು ಬಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರದ ಈ ಜಾತಿ ಗಣತಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಹೊಂಬುಜ ಜೈನ ಮಠದ ಪೀಠಾಧೀಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಶ್ರೀಗಳು, ಜೈನ ಸಮುದಾಯ ಯಾರ ವಿರೋಧಿಗಳೂ ಅಲ್ಲ. ಸಂಪುಟ ಸಭೆಯಲ್ಲಿ ಮಂಡಿಸಿರುವ ವರದಿಯಲ್ಲಿ ಜೈನರ ಸಂಖ್ಯೆಯು 2011ನೇ ಸಾಲಿಗಿಂತ ಕಡಿಮೆ ಇದೆ. ರಾಜ್ಯದಲ್ಲಿ ಜೈನರ ಸಂಖ್ಯೆ ಹೆಚ್ಚಾಗಬೇಕಾಗಿದೆ. 3 ಲಕ್ಷ ಜೈನರ ಸಂಖ್ಯೆ ತೋರಿಸಿರುವ ಆರ್ಥಿಕ ಸಮೀಕ್ಷೆ ಗೊಂದಲಮಯವಾಗಿದೆ. ರಾಜ್ಯದಲ್ಲಿ ಅಂದಾಜಿನ ಪ್ರಕಾರ 17 ರಿಂದ 20 ಲಕ್ಷ ಜೈನ ಸಮುದಾಯದವರಿದ್ದಾರೆ. ಕರ್ನಾಟಕದ್ಯಂತ ಗ್ರಾಮೀಣ ಪ್ರದೇಶದಲ್ಲಿ ದುಡಿದು ತಿನ್ನುವ ಬಡ ರೈತಾಪಿ ಜನ ಜೈನ ಸಮಾಜದಲ್ಲೂ ಇದ್ದಾರೆ. ಈ ಬಗ್ಗೆ ಕ್ರಮಬದ್ಧ ಗಣತಿ ಆಗಬೇಕು. ಸರ್ಕಾರ ನಡೆಸಲಾದ ಜಾತಿ ಗಣತಿ ವರದಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದರು.

ಜೈನ ಸಮಾಜವು ಒಗ್ಗಟ್ಟಿನಿಂದ ಮುಂದೆ ಹೋಗಬೇಕಿದೆ. ಜಾತಿ, ಧರ್ಮಕ್ಕೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಮನ್ನಣೆಗಳನ್ನು ನೀಡುವ ವ್ಯವಸ್ಥೆ ಇದೆ. ರಾಜ್ಯದ ಜೈನ ದೇವಾಲಯಗಳಲ್ಲಿ ಒಂದೇ ನಮೂನೆಯಡಿ ಸಮಗ್ರ ಜೈನ ಸಮುದಾಯದ ಜನಸಂಖ್ಯೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕು. ಜನಗಣತಿಯ ಅಂಕಿ ಅಂಶದ ಮೇಲೆ ಸರ್ಕಾರದ ಬಳಿ ಸಂವಿಧಾನಾತ್ಮಕವಾಗಿ ಹಕ್ಕು ಕೇಳಬಹುದೇ ವಿನಃ ರಾಜಕೀಯವಾಗಿ ನಮಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಹೇಳಿದರು.

Leave a Comment