ಹೊಸನಗರ

ಹೊಂಬುಜದಲ್ಲಿ ವೈಭವದ ವಿಜಯದಶಮಿ: ಸರ್ವರ ಶ್ರೇಯಸ್ಸಿಗಾಗಿ ಶ್ರೀಗಳ ಶುಭಹಾರೈಕೆ

The Sharannavaratri and Vijayadashami celebrations of the 'Parabhava' Samvatsara concluded with great devotion in Hombuja.

Hombuja Dasara

ಹೊಸನಗರ: ಪ್ರಸಿದ್ಧ ಜೈನ ತೀರ್ಥಕ್ಷೇತ್ರವಾದ ಹೊಂಬುಜದಲ್ಲಿ ಶ್ರೀ ಪರಾಭವನಾಮ ಸಂವತ್ಸರದ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವವು ಭಕ್ತಿಭಾವದಿಂದ ಸಂಪನ್ನಗೊಂಡಿತು.

WhatsApp Group Join Now
Telegram Group Join Now
Instagram Group Join Now

ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಾನದಲ್ಲಿ, ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ಜರುಗಿದವು.

ಉತ್ಸವದ ಅಂಗವಾಗಿ ಆಶೀರ್ವಚನ ನೀಡಿದ ಶ್ರೀಗಳು, “ಮನುಷ್ಯನು ತನ್ನ ಜೀವನದ ಗುರಿಯನ್ನು ಮುಟ್ಟಲು ಕರ್ತವ್ಯನಿಷ್ಠೆಯ ಜೊತೆಗೆ ಧಾರ್ಮಿಕ ಮಾರ್ಗದಲ್ಲಿ ನಡೆಯುವುದು ಅತ್ಯವಶ್ಯಕ. ಪ್ರತಿಯೊಬ್ಬರೂ ಯಶಸ್ಸಿನ ಹಾದಿಯಲ್ಲಿ ಸಾಗಿ ಶ್ರೇಯಸ್ಕರ ಬದುಕನ್ನು ಕಟ್ಟಿಕೊಳ್ಳಲು ಮಾತೆ ಪದ್ಮಾವತಿ ದೇವಿಯ ಅನುಗ್ರಹ ಸದಾ ಇರಲಿ” ಎಂದು ಹಾರೈಸಿದರು. ಮುಂದುವರಿದು ಮಾತನಾಡಿದ ಅವರು, ಉತ್ತಮ ಸಂಸ್ಕೃತಿ, ಪರಸ್ಪರ ಪ್ರೀತಿ-ವಾತ್ಸಲ್ಯ ಹಾಗೂ ಶಾಂತಿಯುತ ವಾತಾವರಣದಿಂದ ಮಾತ್ರ ಸಂಘರ್ಷವಿಲ್ಲದ ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಕಿವಿಮಾತು ಹೇಳಿ, ನೆರೆದಿದ್ದ ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ವಿಶೇಷ ಪೂಜಾ ಕೈಂಕರ್ಯಗಳು:

ವಿಜಯದಶಮಿಯ ಪ್ರಯುಕ್ತ ಮುಂಜಾನೆ ಕುಮುದ್ವತಿ ತೀರ್ಥದಿಂದ ಪವಿತ್ರ ಜಲವನ್ನು ತರಲಾಯಿತು. ಆನೆ ‘ಐಶ್ವರ್ಯ’, ವಾದ್ಯಗೋಷ್ಠಿ ಹಾಗೂ ಜಿನಭಜನೆಯೊಂದಿಗೆ ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿಗಳು ಮತ್ತು ಶ್ರಾವಕರು ಪವಿತ್ರ ಜಲವನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದರು. ಕ್ಷೇತ್ರದ ಶ್ರೀ ಆದಿನಾಥ, ಶ್ರೀ ನೇಮಿನಾಥ, ಶ್ರೀ ಮಹಾವೀರ ತೀರ್ಥಂಕರರು ಹಾಗೂ ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಗಳಲ್ಲಿ ವಿಶೇಷ ಮಹಾಪೂಜೆಗಳು ನೆರವೇರಿದವು. ಇದೇ ವೇಳೆ ಭಕ್ತರು ಬೋಗಾರ ಬಸದಿ, ತ್ರಿಕೂಟ ಜಿನಾಲಯ ಮತ್ತು ಮಕ್ಕಳ ಬಸದಿಗಳಲ್ಲೂ ದೇವರ ದರ್ಶನ ಪಡೆದು ಪುನೀತರಾದರು.

ಆಕರ್ಷಕ ಬನ್ನಿಮಂಟಪ ಉತ್ಸವ:

ಕ್ಷೇತ್ರದ ಸಂಪ್ರದಾಯದಂತೆ ನಿಷಿಧಿ ಮಂಟಪದಲ್ಲಿ ಪೂರ್ವ ಭಟ್ಟಾರಕ ಶ್ರೀಗಳ ಸ್ಮರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನಿರಿಸಿ ಬನ್ನಿಮಂಟಪದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗಜರಾಣಿ ಐಶ್ವರ್ಯ, ಮಾನವಿ ಅಶ್ವ ಹಾಗೂ ಕಲಾವಿದರ ಡೊಳ್ಳು ಕುಣಿತ ವಿಶೇಷ ಆಕರ್ಷಣೆಯಾಗಿತ್ತು.

ಬನ್ನಿಮಂಟಪದಲ್ಲಿ ಶಮೀ ವೃಕ್ಷಕ್ಕೆ (ಬನ್ನಿ ಮರ) ವಿಶೇಷ ಪೂಜೆ ಹಾಗೂ ಪ್ರದಕ್ಷಿಣೆ ಸಲ್ಲಿಸಲಾಯಿತು. ಸಕಲರ ಇಷ್ಟಾರ್ಥಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ ಎಂದು ಪ್ರಾರ್ಥಿಸಿದ ಶ್ರೀಗಳು, ಭಕ್ತರಿಗೆ ಬನ್ನಿ ಪತ್ರೆಗಳನ್ನು ಪ್ರಸಾದವಾಗಿ ವಿತರಿಸಿದರು. ರಾತ್ರಿ ಶ್ರೀಮಠದಲ್ಲಿ ಸಾಂಪ್ರದಾಯಿಕ ಸಿಂಹಾಸನ ಪೂಜೆ ನೆರವೇರಿತು. ಜಿನಾಗಮ ಶಾಸ್ತ್ರದಂತೆ ಪುರೋಹಿತ ವರ್ಗದವರು ಪೂಜಾ ವಿಧಿಗಳನ್ನು ನಡೆಸಿಕೊಟ್ಟರೆ, ನಾರಾಯಣ ಮತ್ತು ತಂಡದವರ ಸುಶ್ರಾವ್ಯ ವಾದ್ಯಗೋಷ್ಠಿ ಉತ್ಸವದ ಕಳೆಯನ್ನು ಹೆಚ್ಚಿಸಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!