ಹೊಸನಗರ

ಶರನ್ನವರಾತ್ರಿ ಸಂಭ್ರಮ: ಹೊಂಬುಜದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಆಯುಧ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ

Hombuja Sri stated that in today's modern era, the use of machinery, vehicles, and weapons has become inevitable.

Hombuja Dasara Ayudapuja4

ಹೊಸನಗರ: ಇಂದಿನ ಆಧುನಿಕ ಯುಗದಲ್ಲಿ ಯಂತ್ರೋಪಕರಣಗಳು, ವಾಹನಗಳು ಹಾಗೂ ಆಯುಧಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಅವುಗಳನ್ನು ಸುಜ್ಞಾನ ಮತ್ತು ಸಂವೇದನಾಶೀಲತೆಯಿಂದ ಸದ್ಬಳಕೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನುಡಿದರು.

WhatsApp Group Join Now
Telegram Group Join Now
Instagram Group Join Now

ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಮಹಾನವಮಿಯಂದು ಜರುಗಿದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. “ದೈನಂದಿನ ಜೀವನ ನಿರ್ವಹಣೆ, ಕೃಷಿ, ನೀರಾವರಿ ಹಾಗೂ ತೋಟಗಾರಿಕಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಯಂತ್ರಗಳಿಂದ ಬಹುಪಯೋಗವಿದೆ. ಇವು ಮನುಷ್ಯನಿಗೆ ಪೂರಕವಾಗಿದ್ದರೂ, ಅವುಗಳನ್ನು ವಿವೇಚನೆಯಿಂದ ಬಳಸುವುದು ನ್ಯಾಯೋಚಿತ” ಎಂದು ಭಕ್ತರಿಗೆ ಕರೆ ನೀಡಿದರು.

ಶ್ರದ್ಧಾಭಕ್ತಿಯಿಂದ ಜರುಗಿದ ಜಿನಾಗಮೋಕ್ತ ಪೂಜೆ:

ನವಮಿ ಉತ್ಸವದ ಅಂಗವಾಗಿ ಮುಂಜಾನೆ ಕುಮುದ್ವತಿ ತೀರ್ಥದಿಂದ ಪವಿತ್ರ ಅಗ್ರೋಧಕವನ್ನು ಸಾಲಂಕೃತ ಶೋಭಾಯಾತ್ರೆಯ ಮೂಲಕ ಶ್ರೀಕ್ಷೇತ್ರದ ಸನ್ನಿಧಿಗೆ ತರಲಾಯಿತು. ಬಳಿಕ ಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಸ್ವಸ್ತಿಶ್ರೀಗಳವರ ನೇತೃತ್ವದಲ್ಲಿ ಜಿನಾಗಮೋಕ್ತ ವಿಧಿವಿಧಾನಗಳಂತೆ ವಿಶೇಷ ಪೂಜೆ ಹಾಗೂ ಆರಾಧನೆಗಳು ನೆರವೇರಿದವು.

ಇದೇ ವೇಳೆ ಶ್ರೀ ನೇಮಿನಾಥ, ಶ್ರೀ ಮಹಾವೀರ, ಶ್ರೀ ಆದಿನಾಥ ತೀರ್ಥಂಕರರು ಹಾಗೂ ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸ್ಥಳೀಯ ಹಾಗೂ ಪರವೂರ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶ್ರೀ ಪದ್ಮಾವತಿ ಮಹಿಳಾ ಸಂಘದ ಶ್ರಾವಿಕೆಯರು ಜಿನನಾಮ ಸ್ಮರಣೆಯೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ವಾಹನ ಹಾಗೂ ಗಜ-ಅಶ್ವಗಳಿಗೆ ವಿಶೇಷ ಪೂಜೆ:

ನವಮಿಯ ವಿಶೇಷವಾಗಿ ಶ್ರೀಮಠದ ವಾಹನಗಳಿಗೆ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಮಠದ ಆನೆ ‘ಐಶ್ವರ್ಯ’ ಹಾಗೂ ಕುದುರೆಗೆ ವಿಶೇಷ ಪೂಜೆ ನೆರವೇರಿದ್ದು ವಿಶೇಷವಾಗಿತ್ತು. ವಾದ್ಯಗೋಷ್ಠಿಗಳ ನಾದದೊಂದಿಗೆ ಭಕ್ತರು ಮೊಳಗಿಸಿದ ‘ಶ್ರೀ ಪದ್ಮಾವತಿ ಮಾತಾಕೀ ಜೈ’, ‘ಅಹಿಂಸೋ ಪರಮೋ ಧರ್ಮಕೀ ಜೈ’ ಎಂಬ ಜಯಘೋಷಗಳು ಭಕ್ತಿಭಾವವನ್ನು ಇಮ್ಮಡಿಗೊಳಿಸಿದವು.

ರಾತ್ರಿ ನಡೆದ ಅಷ್ಟಾವಧಾನ ಸೇವೆಯೊಂದಿಗೆ ನವಮಿಯ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಪೂಜಾ ಸೇವಾಕರ್ತರಾದ ದೆಹಲಿಯ ರೇಣು ಜೈನ್, ಕೆ.ಕೆ. ಜೈನ್ ಹಾಗೂ ಮುಂಬೈನ ರೀತು ಮತ್ತು ಸಚಿನ್ ಜೈನ್ ಪರಿವಾರದವರಿಗೆ ಶ್ರೀಗಳು ಆಶೀರ್ವಾದ ಮಾಡಿದರು.

ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಆಗಮಿಸಿದ್ದ ಭಕ್ತಾದಿಗಳನ್ನು ಸ್ವಾಗತಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!