ರಿಪ್ಪನ್ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮಾಜ ಮಂದಿರದಲ್ಲಿ ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಆಯೋಜಿಸಲಾಗಿದ್ದ ‘ನವಚಂಡಿಕಾ ಹೋಮ’ವು ಅತ್ಯಂತ ಭಕ್ತಿ-ಶ್ರದ್ಧೆಯಿಂದ ನೆರವೇರಿತು.
ವೇದಮೂರ್ತಿಗಳಾದ ಗಂಗೊಳ್ಳಿ ಸುದರ್ಶನ ಆಚಾರ್ಯ, ಗಣೇಶ್ ಭಟ್ ಹಾಗೂ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಕಾರ್ಯಕ್ರಮದ ಅಂಗವಾಗಿ ಗುರುಗಣೇಶ ಪೂಜೆ, ಪುಣ್ಯಾಹ, ಕಲಶ ಪ್ರತಿಷ್ಠಾಪನೆ, ದೇವತಾ ಪ್ರಾರ್ಥನೆ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ನವಚಂಡಿಕಾ ಹೋಮವನ್ನು ವಿಧ್ಯುಕ್ತವಾಗಿ ನಡೆಸಲಾಯಿತು.
ಹೋಮದ ಪೂರ್ಣಾಹುತಿಯ ನಂತರ ಆಶೀರ್ವಚನ ನೀಡಿದ ಗಣೇಶ್ ಭಟ್ ಅವರು, “ಜಿ.ಎಸ್.ಬಿ ಸಮಾಜದ ಬಾಂಧವರು ಇಂದು ಉತ್ತಮ ಶಿಕ್ಷಣ ಪಡೆದು, ಉದ್ಯೋಗದಾತರಾಗಿ ಹಾಗೂ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ದೇವರ ಅನುಗ್ರಹವೇ ಮೂಲ ಕಾರಣ. ಕಾಲ ಎಷ್ಟೇ ಬದಲಾದರೂ ನಾವು ನಮ್ಮ ಮೂಲ ಆಚಾರ-ವಿಚಾರಗಳನ್ನು ಮರೆಯಬಾರದು. ಬ್ರಾಹ್ಮಣ್ಯದ ಸಂಸ್ಕಾರವನ್ನು ಉಳಿಸಿ, ಬೆಳೆಸುವ ಮೂಲಕ ನಮ್ಮ ಸನಾತನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು” ಎಂದು ಕರೆ ನೀಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿ.ಎಸ್.ಬಿ ಸಮಾಜದ ಅಧ್ಯಕ್ಷ ಗಣೇಶ್ ಎನ್. ಕಾಮತ್, ಪ್ರಮುಖರಾದ ಹರೀಶ್ ಪ್ರಭು, ಉಮೇಶ್ ಭಟ್, ದೀಪಕ್ ಭಗತ್, ರಮೇಶ್ ಶೆಣೈ, ಜೆ. ರಾಧಾಕೃಷ್ಣ, ಬಾಳೂರು ಡಿ. ನರಸಿಂಹ ಕಾಮತ್, ರಾಜೇಶ್ ಪ್ರಭು, ಸತೀಶ್ ಕಿಣಿ, ವಿಘ್ನೇಶ್ ಪ್ರಭು, ಲಕ್ಷ್ಮಣ ಪೈ ಸೇರಿದಂತೆ ಸಮಾಜದ ನೂರಾರು ಬಾಂಧವರು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.

