ಹೊಸನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳೇ ಕಳೆಯುತ್ತಿದ್ದರೂ, ಕೆಲವು ಸರ್ಕಾರಿ ಅಧಿಕಾರಿಗಳು ಇನ್ನೂ ಬ್ರಿಟಿಷರ ಕಾಲದ ಧೋರಣೆಯನ್ನೇ ಮುಂದುವರಿಸಿದ್ದಾರೆ. ಕಚೇರಿಗೆ ಬರುವ ಜನಸಾಮಾನ್ಯರನ್ನು ಸಬೂಬು ಹೇಳಿ ವಾಪಸ್ ಕಳುಹಿಸುವ ಬದಲು, ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವ ಮನಸ್ಥಿತಿಯನ್ನು ಅಧಿಕಾರಿವರ್ಗ ಬೆಳೆಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.
ತಾಲೂಕಿನ ಬಿದನೂರು ನಗರದ ಅಮೃತ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ‘ಪ್ರಜಾಸೇವೆ’ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಜನರ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಟ್ಟಿದ್ದರೆ ಇಂತಹ ಸಭೆಗಳನ್ನು ನಡೆಸುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಬಹುತೇಕ ಕಡೆಗಳಲ್ಲಿ ಅರ್ಜಿ ಹಿಡಿದು ಬರುವ ಬಡಜನರ ಸಮಸ್ಯೆ ಬಗೆಹರಿಸುವುದಕ್ಕಿಂತ, ಅವರನ್ನು ಹೇಗೆ ಸಾಗಹಾಕಬೇಕು ಎಂದು ಯೋಚಿಸುವವರೇ ಹೆಚ್ಚಾಗಿದ್ದಾರೆ” ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ತಮ್ಮ ಹಿಂದಿನ ಸಚಿವಾವಧಿಯ ಕೆಲಸಗಳನ್ನು ಸ್ಮರಿಸಿದ ಅವರು, ನಗರ ಹೋಬಳಿಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ವಿಶೇಷ ಅನುದಾನದಡಿ ಪೊಲೀಸ್ ವಸತಿಗೃಹ ಹಾಗೂ ಬಹುಗ್ರಾಮ ಕುಡಿಯುವ ನೀರಿನಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಅರಣ್ಯ ಭೂಮಿ ಸಾಗುವಳಿ ಹಾಗೂ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದ ಕೆಲವು ತೊಡಕುಗಳು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
‘ಕನ್ಯಾಭಾಗ್ಯ’ ಸೇರಿದಂತೆ 72 ದೂರುಗಳ ಸುರಿಮಳೆ:
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 72 ಅರ್ಜಿಗಳನ್ನು ಸ್ವೀಕರಿಸಲಾಯಿತು. ವಿಶೇಷವೆಂದರೆ, ‘ನಗರ ಹೋಬಳಿಯ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ’ ಎಂಬ ಅಪರೂಪದ ಹಾಗೂ ವಿಚಿತ್ರ ದೂರೊಂದು ಸಭೆಯಲ್ಲಿ ಗಮನ ಸೆಳೆಯಿತು.

ಇನ್ನುಳಿದಂತೆ ಮುಳುಗಡೆ ಸಂತ್ರಸ್ತರ ಗೋಳು, ಡೀಮ್ಡ್ ಫಾರೆಸ್ಟ್ ಹಾಗೂ ಅರಣ್ಯ ಭೂಮಿ ಒತ್ತುವರಿ, ಕಾಡುಪ್ರಾಣಿಗಳ ಉಪಟಳ, ಪಹಣಿ ತಿದ್ದುಪಡಿ, ಹಕ್ಕುಪತ್ರ, ರಸ್ತೆ, ಕುಡಿಯುವ ನೀರು ಹಾಗೂ ಮಾಸಾಶನಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಜೊತೆಗೆ, ನಗರದಲ್ಲಿ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿರುವುದು, ನಾಡಕಚೇರಿ ಕಟ್ಟಡ ಸಿದ್ಧವಾಗಿದ್ದರೂ ಉದ್ಘಾಟನೆ ಭಾಗ್ಯ ಕಾಣದಿರುವುದು ಹಾಗೂ ಕರಿಮನೆ ಸಂತ್ರಸ್ತರಿಗೆ ಭೂಮಿ ಮಂಜೂರಾಗದಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ಹೊರಹಾಕಿದರು.
4 ಗಂಟೆ ತಡವಾಗಿ ಬಂದ ಶಾಸಕರ ವಿರುದ್ಧ ಆಕ್ರೋಶ:
ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಭೆ ಆರಂಭವಾಗಬೇಕಿತ್ತು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಜನರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದರು. ಆದರೆ, ಸ್ವತಃ ಶಾಸಕ ಆರಗ ಜ್ಞಾನೇಂದ್ರ ಅವರು ಮಧ್ಯಾಹ್ನ 2.30ರ ಸುಮಾರಿಗೆ ಸಭೆಗೆ ಆಗಮಿಸಿದರು. ಬೆಳಿಗ್ಗೆಯಿಂದಲೇ ಶಾಸಕರಿಗಾಗಿ ಕಾದು ಹೈರಾಣಾಗಿದ್ದ ಸಾರ್ವಜನಿಕರು, ಒಂದೇ ಸಮಯಕ್ಕೆ ಎರಡು ಕಡೆ ಸಭೆ ನಿಗದಿಪಡಿಸಿಕೊಂಡಿದ್ದ ಶಾಸಕರ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜನರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಶಾಸಕರು, “ಎರಡು ತಾಲೂಕುಗಳ ಸಭೆಗಳನ್ನು ಒಂದೇ ಸಮಯಕ್ಕೆ ನಿಗದಿಪಡಿಸಿದ್ದರಿಂದ ಇಲ್ಲಿಗೆ ಬರುವುದು ತಡವಾಯಿತು. ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ” ಎಂದು ಸಮಜಾಯಿಷಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಭರತ್ರಾಜ್, ಗ್ರೇಡ್-2 ತಹಸೀಲ್ದಾರ್ ಸುಧೀಂದ್ರಕುಮಾರ್, ತಾ.ಪಂ ಇಒ ನರೇಂದ್ರಕುಮಾರ್, ಕೆಡಿಪಿ ಸದಸ್ಯೆ ಸುಮಾ ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಶಾಂತರಾಜ್, ಮೆಸ್ಕಾಂ ಎಇಇ ಚಂದ್ರಶೇಖರ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ಸಿಡಿಪಿಒ ಗಾಯತ್ರಿ ಹಾಗೂ ಕಂದಾಯ ಇಲಾಖೆಯ ಕಟ್ಟೆ ಮಂಜುನಾಥ್, ಚಿರಾಗ್, ರೇಣುಕಯ್ಯ, ಶಿಲ್ಪಾ, ಜಾಗೃತಿ, ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

