ಹೊಸನಗರ: ಸ್ಥಳೀಯ ವ್ಯಾಪಾರಿಗಳ ಆರ್ಥಿಕ ಬಲವರ್ಧನೆಗಾಗಿ ಶೀಘ್ರವೇ ‘ಹೊಸನಗರ ವರ್ತಕರ ಸೌಹಾರ್ದ ಸಹಕಾರಿ ಸಂಘ’ವನ್ನು ಪ್ರಾರಂಭಿಸಲು ಹೊಸನಗರ ವರ್ತಕರ ಸಂಘದ (ರಿ.) ಸಾಮಾನ್ಯ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಶುಕ್ರವಾರ ಪಟ್ಟಣದ ಡಿಸಿಸಿ ಬ್ಯಾಂಕ್ ಸಹಕಾರಿ ಭವನದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. 400ಕ್ಕೂ ಹೆಚ್ಚು ಸದಸ್ಯಬಲ ಹೊಂದಿರುವ ಸಂಘದ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಸಂಘದ ಸರ್ವತೋಮುಖ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಸದಸ್ಯರಿಂದ ಹಲವು ಉಪಯುಕ್ತ ಸಲಹೆ-ಸೂಚನೆಗಳನ್ನು ಪಡೆಯಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂರ್ಣೇಶ್ ಮಲೆಬೈಲು, “ಹೊಸನಗರ ಪಟ್ಟಣಕ್ಕೆ ನಿಟ್ಟೂರು, ಮಾಸ್ತಿಕಟ್ಟೆ, ಅರಳಸುರುಳಿ, ಬಿಲ್ಲೇಶ್ವರ, ಜೇನಿ ಹಾಗೂ ಬಟ್ಟೆಮಲ್ಲಪ್ಪ ಭಾಗಗಳವರೆಗೂ ದೊಡ್ಡ ಮಾರುಕಟ್ಟೆ ವ್ಯಾಪ್ತಿಯಿದೆ. ಹೀಗಾಗಿ ಸ್ಥಳೀಯ ವರ್ತಕರು ಕೇವಲ ಚಿಲ್ಲರೆ ವ್ಯಾಪಾರಕ್ಕೆ ಸೀಮಿತವಾಗದೆ, ಸಗಟು (ಹೋಲ್ಸೇಲ್) ವ್ಯಾಪಾರಕ್ಕೂ ಸಜ್ಜಾಗಬೇಕಿದೆ” ಎಂದು ತಿಳಿಸಿದರು.
ಇಂದಿನ ಆನ್ಲೈನ್ ಯುಗದ ಸವಾಲುಗಳ ಕುರಿತು ಕಿವಿಮಾತು ಹೇಳಿದ ಅವರು, “ಗ್ರಾಹಕರನ್ನು ಸೆಳೆಯಲು ನಾವು ವೈವಿಧ್ಯಮಯ ಹಾಗೂ ಗುಣಮಟ್ಟದ ಸರಕುಗಳನ್ನು ನ್ಯಾಯಯುತ ದರದಲ್ಲಿ ನೀಡಬೇಕು. ಜೊತೆಗೆ ನಗುಮೊಗದ ಸೇವೆ, ವಿಶಾಲ ಹಾಗೂ ಆಕರ್ಷಕವಾದ ಗ್ರಾಹಕ ಸ್ನೇಹಿ ವ್ಯಾಪಾರಿ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ಆಗ ಮಾತ್ರ ಆನ್ಲೈನ್ ಮಾರುಕಟ್ಟೆಗೆ ತಕ್ಕ ಪೈಪೋಟಿ ನೀಡಿ ಗ್ರಾಹಕರ ಸಂತೃಪ್ತಿ ಗಳಿಸಲು ಸಾಧ್ಯ” ಎಂದು ವರ್ತಕರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ 260ಕ್ಕೂ ಹೆಚ್ಚು ವರ್ತಕ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

