ರಿಪ್ಪನ್ಪೇಟೆ: ಶ್ರದ್ಧಾಭಕ್ತಿಯ ದೇವಿ ಆರಾಧನೆಯು ಮನುಷ್ಯನಲ್ಲಿನ ಆಸೆ-ದುರಾಸೆಗಳನ್ನು ನಿಯಂತ್ರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಜೊತೆಗೆ ವ್ಯಕ್ತಿಯಲ್ಲಿ ತಪೋಶಕ್ತಿ, ತ್ಯಾಗ ಮನೋಭಾವ, ನಿಷ್ಠೆ ಹಾಗೂ ಕಷ್ಟದ ಸಮಯವನ್ನು ಎದುರಿಸುವ ತಾಳ್ಮೆಯನ್ನು ಹೆಚ್ಚಿಸುತ್ತದೆ ಎಂದು ತ್ಯಾರಂದೂರು ಮನೆತನದ ಹಿರಿಯರಾದ ನಾಗವೇಣಮ್ಮ ಬಸಪ್ಪಗೌಡ ಅಭಿಪ್ರಾಯಪಟ್ಟರು.
ಶರನ್ನವರಾತ್ರಿಯ ಪ್ರಯುಕ್ತ ತ್ಯಾರಂದೂರಿನ ಶ್ರೀ ಕಲಾನಾಥೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದೇವಿ ಪಾರಾಯಣ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತ್ಯಾರಂದೂರು ಮನೆತನದ ಪೂರ್ವಿಕರಾದ ತಾಯಮ್ಮ ಈಶ್ವರಪ್ಪಗೌಡ, ಶಂಕರಮ್ಮ ಗುರಪ್ಪಗೌಡ ಹಾಗೂ ನಾಗವೇಣಮ್ಮ ಬಸಪ್ಪಗೌಡ ಅವರು ಹಾಕಿಕೊಟ್ಟ ಧಾರ್ಮಿಕ ಪರಂಪರೆಯನ್ನು ಇಂದಿನ ಪೀಳಿಗೆಯವರಾದ ಜಯಮ್ಮ (ಸಣ್ಣಮ್ಮ) ರುದ್ರಪ್ಪಗೌಡ ಮತ್ತು ನಾಗವೇಣಮ್ಮ ನಾಗಪ್ಪಗೌಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಆಚರಣೆಯ ವಿಶೇಷತೆ:
ನವರಾತ್ರಿಯ ಸಂದರ್ಭದಲ್ಲಿ ಕನ್ಯಾಕುವರಿಯರಿಗೆ ಹಾಗೂ ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ಇಲ್ಲಿನ ತಲೆಮಾರುಗಳ ಪದ್ಧತಿಯಾಗಿದೆ. ಮಾತೃ ಸ್ವರೂಪಿಣಿಯಾದ ಮುತ್ತೈದೆಯರು ಕನ್ಯಾಕುವರಿಯರಿಗೆ ಅರಿಶಿಣ-ಕುಂಕುಮವಿಟ್ಟು, ಮಡಿಲಿಗೆ ಬಾಗಿನ ತುಂಬಿ ಆರತಿ ಬೆಳಗುತ್ತಾರೆ. ಬಳಿಕ ದೇವಿಯ ಸನ್ನಿಧಿಯಲ್ಲಿ ಅವರ ಮುಂದಿನ ಬದುಕು ಉಜ್ವಲ ಹಾಗೂ ಸುಖಮಯವಾಗಿರಲಿ ಎಂದು ಹರಸುತ್ತಾರೆ. ಈ ವೇಳೆ ಕನ್ಯಾಕುವರಿಯರ ಪಾದ ಸ್ಪರ್ಶಿಸುವ ಬದಲು, ಭೂಮಿಗೆ ನಮಸ್ಕರಿಸಿ ಶುಭ ಕೋರುವುದು ಇಲ್ಲಿನ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯವಾಗಿದೆ.
ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಕಲಾನಾಥೇಶ್ವರಿ ದೇವಿಗೆ ವಿಶೇಷ ಸೀರೆ ಹಾಗೂ ಪುಷ್ಪಾಲಂಕಾರ ಮಾಡಿ, ನಿತ್ಯ ದೇವಿ ಪಾರಾಯಣದೊಂದಿಗೆ ಭಕ್ತಿಭಾವದ ಸೇವೆ ಸಲ್ಲಿಸಲಾಯಿತು. ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಜ್ಞಾನ ವೃದ್ಧಿಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶೀಲಾ ಷಣ್ಮುಖ, ಸುಧಾ ಮಲ್ಲಿಕಾರ್ಜುನ, ಅನ್ನಪೂರ್ಣ ನಾಗಲಿಂಗೇಶ್, ಜಯಮಾಲ ಗುರುಮೂರ್ತಿ, ಶ್ಯಾಮಲ ನಂಜುಂಡ, ರಂಜಿತ ವಿಕಾಶ್, ಜ್ಯೋತಿ ಮುರುಗೇಂದ್ರಪ್ಪ, ಅರ್ಪಿತ ವಿಶ್ವಾಸ್, ಅನ್ನಪೂರ್ಣ ಅಯ್ಯಪ್ಪ ಸೇರಿದಂತೆ ತ್ಯಾರಂದೂರು ಮನೆತನದ ಸದಸ್ಯರು ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸಿದರು.

