ಕುಡಿಯುವ ನೀರಿಗೆ ತತ್ವರ, ಖಾಸಗಿ ಬೋರ್‌ವೆಲ್ ವಶಕ್ಕೆ ; ಶಾಸಕ ಆರಗ ಜ್ಞಾನೇಂದ್ರ ಸೂಚನೆ

Written by malnadtimes.com

Published on:

ಹೊಸನಗರ ; ಮುಂಬರುವ ಬಿರುಬೇಸಿಗೆ ಹಿನ್ನಲೆಯಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವರ ಸಂಭವಿಸಬಹುದು. ಈ ಕಾರಣಕ್ಕೆ ಅಗತ್ಯ ಕಂಡುಬಂದಲ್ಲಿ ಖಾಸಗಿ ಒಡೆತನದ ಕೊಳೆವೆಬಾವಿಗಳನ್ನು ವಶಕ್ಕೆ ಪಡೆದು ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಕುಡಿಯುವ ನೀರಿನ ನಿರ್ವಹಣೆ ಕುರಿತಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಜೆಜೆಎಂ ಕುಡಿಯುವ ನೀರು ಸರಬರಾಜು ಯೋಜನೆ ತಾಲೂಕಿನಲ್ಲಿ ಅನುಷ್ಠಾನಗೊಂಡು ಕಾಮಗಾರಿ ಚಾಲ್ತಿಯಲ್ಲಿದೆ. ಕಾಮಗಾರಿ ಅನುಷ್ಠಾನದಲ್ಲಿ ಈಗಾಗಲೇ ಹಲವು ದೂರುಗಳು ಕೇಳಿಬಂದಿವೆ. ಪೈಪ್ ಅಳವಡಿಕೆ ಅವೈಜ್ಞಾನಿಕವಾಗಿದೆ. ನಲ್ಲಿ ಕಟ್ಟೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಮಟ್ಟದ ರಸ್ತೆ ಹಾದು ಹೋಗುವ ಇಕ್ಕೆಲಗಳಲ್ಲಿ ಪೈಪ್ ಲೈನ್ ಅಳವಡಿಕೆ ಆಗಿದೆ. ನೀರಿನ ಟ್ಯಾಂಕ್ ನಿರ್ಮಾಣ ಕಳಪೆಯಿಂದ ಕೂಡಿದೆ. ಟ್ಯಾಂಕ್ ನಿರ್ಮಾಣದ ಬಳಿಕ ಗುತ್ತಿಗೆದಾರ ಒಮ್ಮೆಯೂ ಟ್ಯಾಂಕಿಗೆ ನೀರು ತುಂಬಿಸಿ ಸೋರಿಕೆ ಪರಿಶೀಲನೆ ನಡೆಸಿಲ್ಲ ಸೇರಿದಂತೆ ಹಲವಾರು ಗಂಭೀರ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಇಂತಹ ಕಳಪೆ ಕಾಮಗಾರಿ ನಡೆಸಿ ಬಿಲ್ ಪಡೆದು ಜಾಗ ಖಾಲಿ ಮಾಡುವಂತ ಗುತ್ತಿಗೆದಾರನ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಕೈಗೊಂಡು, ‘ಓಕೆ’ ಆದ ಬಳಿಕವೇ ಬಿಲ್ ಪಾವತಿ ಮಾಡಿ ಎಂದು ಕುಡಿಯುವ ನೀರು ಯೋಜನೆ ಅಭಿಯಂತರರಿಗೆ ಶಾಸಕ ಆರಗ ತಾಕೀತು ಮಾಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಈಗಾಗಲೇ 470 ಕೋಟಿ ರೂ‌. ಅನುದಾನದಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ. ತಾಲೂಕಿನ ಕಬಳೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜಾಕ್ ವೆಕ್ ನಿರ್ಮಾಣ, ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ಸುಮಾರು 54 ಎಕರೆ ಪ್ರದೇಶ ಕಾಯ್ದಿರಿಸಲಾಗಿದೆ. ಮರ-ಮಟ್ಟು ನಾಶಪಡಿಸದಂತೆ ಹಾಗೆಯೇ ಉಳಿಸಿಕೊಂಡು ಸುತ್ತಲೂ ತಂತಿಬೇಲಿ ನಿರ್ಮಾಣ ಕಾಮಗಾರಿ ನಡೆಯಲಿದೆ.

ತಾಲೂಕಿನ ಒಟ್ಟಾರೆ 970 ಕಿ.ಮೀ ಪೈಪ್ ಲೈನ್ ಮಾರ್ಗದಲ್ಲಿ ಈಗಾಗಲೇ 660 ಕಿ.ಮೀ ಉದ್ದದ ಪೈಪ್ ಅಳವಡಿಕೆ ಕಾಮಗಾರಿ ಸಂಪೂರ್ಣಗೊಂಡಿದೆ. ಭೌಗೋಳಿಕ ಪ್ರದೇಶಕ್ಕೆ ತಕ್ಕಂತೆ, ಗ್ರಾಮಗಳ ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ 5/10 ಸಾವಿರ ಲೀಟರ್ ಸಾರ್ಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಹುಂಚ ಹಾಗೂ ನಗರ ಹೋಬಳಿಯ 12 ಜೆಜೆಎಂ ಕಾಮಗಾರಿಯಲ್ಲಿ 7 ಕಾಮಗಾರಿ ಆರಂಭಗೊಂಡಿದೆ. ಬೇಸಿಗೆ ಹಿನ್ನಲೆಯಲ್ಲಿ ಚುನಾಯಿತಿ ಗ್ರಾಮ ಪಂಚಾಯತಿ ಸದಸ್ಯರು ಕುಡಿಯುವ ನೀರಿನ ಬಳಕೆ ಕುರಿತಂತೆ ಜನಜಾಗೃತಿಗೆ ಮುಂದಾಗಬೇಕು. ಮುಂದೆ ಶುದ್ದ ಕುಡಿಯುವ ನೀರಿನ ಸರಬರಾಜಿನ ಬೆಲೆ ಹೆಚ್ಚಳ ಕಾರಣ, ಬಳಕೆದಾರರಿಗೆ ನೀರಿನ ಸದ್ಬಳಕೆ ಕುರಿತು ಅಗತ್ಯ ಪಾಠ ಮಾಡುವ ಜವಾಬ್ದಾರಿ ಪಿಡಿಒಗಳ ಮೇಲಿದೆ ಎಂದರು.

ಒಟ್ಟಾರೆ, ಈಗಾಗಲೇ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ನಾಲ್ಕೈದು ಕೊಳವೆಬಾವಿ ಕೊರೆಸಲಾಗಿದ್ದು, ಅವುಗಳಲ್ಲಿ ಶೇ.70 ವಿಫಲಗೊಂಡಿವೆ. ಜೆಜೆಎಂ ಕಾಮಗಾರಿ ಸಹ ಅಪೂರ್ಣವಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಅನುಮತಿ ಸಿಕ್ಕಿಲ್ಲ. ಗ್ರಾಮಗಳಲ್ಲಿನ ಈ ಹಿಂದಿನ ಪೈಪ್ ಲೈನ್ ಸಂಪೂರ್ಣ ಧ್ವಂಸಗೊಂಡಿದೆ. ನೀರು ಸರಬರಾಜು ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ ಎಂಬ ನಿಲುವು ಸಭೆಯಲ್ಲಿ ಸ್ಪಷ್ಟವಾಗಿ ಕೇಳಿಬಂತು. ಸುಮಾರು 54 ಕುಟುಂಬಗಳು ವಾಸಿಸುವ ತಾಲೂಕಿನ ಕಟ್ಟಕಡೆಯ ಕೊರನಕೋಟೆಯಂತ ಕುಗ್ರಾಮವೇ ಯೋಜನೆಯ ಸರ್ವೆ ಕಾರ್ಯದಿಂದ ಮಾಯವಾಗಿದೆ ಎಂಬ ದೂರು ಸಭೆಯನ್ನು ಕೆಲವು ಕಾಲ ತಲ್ಲಣಗೊಳಿಸಿತ್ತು.

ಈತನ್ಮಧ್ಯ ಮೆಸ್ಕಾಂ ಅಧಿಕಾರಿಗಳ ವಿಜೆಲೆನ್ಸ್ ಹೆಸರಿನಲ್ಲಿ ಗ್ರಾಮ ಪಂಚಾಯತಿಗಳ ಬೀದಿ ದೀಪ, ಕುಡಿಯುವ ನೀರು ಸಂಪರ್ಕ ಮೋಟಾರ್ ಬಾಬ್ತು ಮನಸೋಯಿಚ್ಛೆ ಲಕ್ಷಾಂತರ ರೂಪಾಯಿ ದಂಡ ವಸೂಲಿಗೆ ಮುಂದಾಗಿದ್ದಾರೆ ಎಂಬ ಪಿಡಿಒಗಳ ಒಕ್ಕೊರಲಿನ ದೂರು ಸಭೆಯಲ್ಲಿ ಕೇಳಿಬಂತು. ಈ ಕುರಿತು ಶಾಸಕ ಆರಗ ತತಕ್ಷಣ ಮೆಸ್ಕಾಂ ವಿಭಾಗದ ಎಸ್‌ಇ ಜೊತೆ ದೂರವಾಣಿ ಮೂಲಕ ಚರ್ಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ರಶ್ಮಿ, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಹುಂಚ, ಮೂಡಗೊಪ್ಪ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪಿಡಿಒಗಳು, ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ, ಸಿಡಿಪಿಓ ಗಾಯತ್ರಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ, ಆಹಾರ ನಿರೀಕ್ಷಕ ಬಾಲಚಂದ್ರ, ಮೀನುಗಾರಿಕೆ ಇಲಾಖೆ ಮೇಲ್ವಿಚಾರಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೇರಿದಂತೆ ಹಲವರು ಹಾಜರಿದ್ದರು.

Leave a Comment