ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲಾ ಸಿದ್ಧಾಂತವನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು : ನಟಿ ಉಮಾಶ್ರೀ

Written by Koushik G K

Updated on:

ತೀರ್ಥಹಳ್ಳಿ : ಪ್ರಬುದ್ಧ, ರಾಜಕಾರಣಿಗಳು, ಹೋರಾಟಗಾರರು, ಸಾಹಿತಿಗಳು ಇರುವಂತಹ ಈ ನೆಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣವಿದೆ,ಎಲ್ಲಾ ಸಿದ್ಧಾಂತವನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸುವ ಕ್ಷೇತ್ರ ಸಾಂಸ್ಕೃತಿಕ ಕ್ಷೇತ್ರ ಎಂದು ವಿಧಾನ ಪರಿಷತ್‌ ಸದಸ್ಯೆ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಪಟ್ಟಣ ಪಂಚಾಯತ್ ನಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತೀರ್ಥಹಳ್ಳಿಗೆ ಈ ಹಿಂದೆಯು ನಾಟಕಕ್ಕಾಗಿ ಬಂದಿದ್ದೆ. ಬಹಳ ವರ್ಷಗಳ ನಂತರ ಶರ್ಮಿಷ್ಟೆ ಎಂಬ ನಾಟಕ ಮಾಡುತ್ತಿದ್ದೇನೆ. ಸಾಮಾನ್ಯವಾಗಿ ರಾಜಕೀಯ ಸನ್ಮಾನಕ್ಕೆ ನಾನು ಹೋಗುವುದಿಲ್ಲ. ಆದರೆ ಇಲ್ಲಿ ನಾಗರೀಕ ಸನ್ಮಾನ ಎಂದು ಹೇಳಿದಾಗ ಒಪ್ಪಿಕೊಂಡೆ. ಕಲಾವಿದ ಎಂದಾಗ ಅದರಲ್ಲಿ ರಾಜಕೀಯ ಮಾಡಬಾರದು, ಅಂತರಂಗದ ಘಟನೆಗಳನ್ನ ಬಿಚ್ಚಿಡುವ ಒಂದು ವಿಶೇಷವಾದ ನಾಟಕವನ್ನು ಅಭಿನಯಿಸಲು ನಿಮ್ಮೂರಿಗೆ ಬಂದಿದ್ದೇನೆ. ನಿಮ್ಮೆಲ್ಲರಿಗೂ ಈ ನಾಟಕ ಇಷ್ಟ ಆಗಬಹುದು ಎಂದು ನಂಬಿದ್ದೇನೆ ಎಲ್ಲರೂ ನಾಟಕಕ್ಕೆ ಬನ್ನಿ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಾಡಿನ ಕಲಾ ಪ್ರಪಂಚದ ಹೆಗ್ಗುರುತು ಉಮಾಶ್ರೀ ಅವರು. ನಾನು ಅವರ ಅಪ್ಪಟ ಅಭಿಮಾನಿ, ಪುಟ್ನಂಜ ಚಿತ್ರವನ್ನು ಹಲವು ಭಾರಿ ನೋಡಿದ್ದೇನೆ. ಅವರ ಪರಿಶ್ರಮ ಬಹಳಷ್ಟು ಇದೆ. ಯಾರದ್ದೋ ಕೃಪಾಕಟಾಕ್ಷದಿಂದ ಬಂದವರಲ್ಲ. ನಾನು ಅವರು ಈಗ ಒಂದೇ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.ಇಂತಹ ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕ‌ರ್ ಮಾತನಾಡಿ, ಉಮಾಶ್ರೀ ಅವರ ಜೊತೆಗೆ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಒಟ್ಟಿಗೆ ಅಕ್ಕಪಕ್ಕ ಕುಳಿತು ಕಾರ್ಯನಿರ್ವಹಿಸಿದ್ದೇವೆ. ತೀರ್ಥಹಳ್ಳಿಗೆ ಕಾರ್ಯಕ್ರಮಕ್ಕಾಗಿ ಬರುತ್ತಿದ್ದೇನೆ ಎಂದು ತಿಳಿಸಿದ್ದರು ಆ ನಂತರ ನಾನೇ ಅಧ್ಯಕ್ಷರ ಬಳಿ ಪೌರ ಸನ್ಮಾನ ಮಾಡಲು ಹೇಳಿದ್ದೆ. ನಾಟಕ ಮಾಡಲು ಬಂದಾಗ ಆ ಸಭೆಯಲ್ಲಿ ರಾಜಕೀಯ ಮಾಡುವುದು ಬೇಡ ಎಂಬ ಕಾರಣದಿಂದ ಪಟ್ಟಣ ಪಂಚಾಯತ್ ನಲ್ಲಿ ಸನ್ಮಾನ ಮಾಡಿದ್ದೇವೆ. ಏಕಪಾತ್ರಾಭಿನಯ ನಾಟಕ ಯಶಸ್ವಿ ಆಗಲಿ ಎಂದು ಹಾರೈಸಿದರು.

ಈ ಸಮಾರಂಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಆಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಪ.ಪಂ. ಅಧಿಕಾರಿ ನಾಗರಾಜ್, ಪ.ಪಂ.ಸದಸ್ಯರು, ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ, ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment