ಯಾವುದೇ ಯೋಜನೆಗಳು ಜನರ ಸಹಭಾಗಿತ್ವದಲ್ಲಿ ರೂಪುಗೊಳ್ಳಬೇಕು ; ವಿವಿಧ ಇಲಾಖಾ ಕರಡು ಅಭಿವೃದ್ದಿ ಯೋಜನೆ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ

Written by Mahesha Hindlemane

Published on:

ಹೊಸನಗರ ; ರಿಪ್ಪನ್‌ಪೇಟೆಯ ಮೂರು ಹೋಟೆಲ್‌ಗಳಿಂದ ವ್ಯಾಜ್ಯ ವಿಲೇವಾರಿಯಲ್ಲಿ ಸೂಕ್ತ ಕ್ರಮವಹಿಸದ ಹಿನ್ನಲೆಯಲ್ಲಿ ಹೋಟೆಲ್ ಸುತ್ತಮುತ್ತ ಭಾರೀ ದುರ್ನಾತ ಹರಡುತ್ತಿದ್ದು, ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದಾಗಿ ಹಲವು ಸಾರ್ವಜನಿಕ ದೂರುಗಳು ಬಂದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಹೋಟೆಲ್ ನಡೆಸುವಂತೆ ಈಗಾಗಲೇ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೂರು ನೋಟೀಸ್ ಜಾರಿ ಮಾಡಿದ್ದರೂ ಈವರೆಗೆ ಯಾವುದೇ ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದಾಗಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ದಾಕ್ಷಾಯಣಿ ಸಭೆಯ ಗಮನ ಸೆಳೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿ ಕೂಡಲೇ ಪೊಲೀಸರ ಸಹಾಯ ಪಡೆದು, ರೋಗರುಜಿನ ಹರಡಲು ಕಾರಣ ಆಗಿರುವ ಇಂತಹ ಹೋಟೆಲ್‌ಗಳನ್ನು ನಾಳೆಯೇ ಬಂದ್ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳಿಗೆ ಸೇರಿದ 2026-27ನೇ ಸಾಲಿನ ಕರಡು ಅಭಿವೃದ್ದಿ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕೃಷಿ ಇಲಾಖೆ ರೈತರಿಗೆ ವಿತರಿಸಿದ ಭತ್ತದ ಬೀಜ ನೆಟ್ಟಿಯಾದ ಬಳಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡುಬಂದಿದೆ ಎಂಬ ದೂರುಗಳು ಕೇಳಿ ಬಂದಿದೆ. ಇದಕ್ಕೆ ಪರಿಹಾರವೇನು? ಇದು ಇಲಾಖೆಯ ನಿರ್ಲಕ್ಷ್ಯ ಅಲ್ಲವೇ? ನೊಂದ ರೈತಾಪಿಗೆ ಯಾರು ಪರಿಹಾರ ಕೊಡೋದು? ಎಂದು ಶಾಸಕರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಸಚಿನ್ ಹೆಗಡೆ, ರಾಜ್ಯ ಬೀಜ ನಿಗಮ ವಿತರಿಸಿದ ಒಂದು ಲಾಟ್‌ನಲ್ಲಿ ಮಾತ್ರವೇ ಈ ರೀತಿಯ ಬೀಜ ವಿತರಣೆ ಆಗಿದೆ. ತಾಲೂಕಿನಲ್ಲಿ ಓರ್ವ ರೈತನ ಒಂದು ಎಕರೆಯಲ್ಲಿ ಅಕಾಲಿಕ ಬೆಳೆ ಬಂದಿದೆ.

ಹವಾಮಾನ ವೈಪರೀತ್ಯವೇ ಇದಕ್ಕೆಲ್ಲ ಕಾರಣ ಎಂದು ಈಗಾಗಲೇ ಇಲಾಖೆಯ ವಿಜ್ಞಾನಿಗಳು ಸ್ಪಷ್ಟ ಪಡಿಸಿದ್ದಾರೆ ಎಂಬ ಅಧಿಕಾರಿಯ ಉತ್ತರಕ್ಕೆ ತೃಪ್ತರಾಗದ ಶಾಸಕರು, ಇದೆಲ್ಲ ಕಥೆ ಬೇಡ..! ನೀವು ನಿಮ್ಮ ಮೇಲಾಧಿಕಾರಿಗಳು ಒಟ್ಟಾಗಿ ರೈತನಿಗೆ ಆಗಿರುವ ನಷ್ಟ ಭರಿಸಿ ಎಂಬ ಸ್ಪಷ್ಟ ಸೂಚನೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ್ ಮಾತನಾಡಿ, ಇಲ್ಲಿನ ಸಾರ್ವಜನಕ ಆಸ್ಪತ್ರೆಯಲ್ಲಿ ಗೈನೋಕಾಲಜಿ, ಅರ್ಥೋಪೆಡಿಕ್ ಹಾಗು ಅನಸ್ತೇಷಿಯ ವೈದ್ಯರು ಮಾತ್ರವೇ ಇಲ್ಲ. ಉಳಿದ ಎಲ್ಲಾ ವಿಭಾಗದಲ್ಲೂ ನುರಿತ ವೈದ್ಯರಿದ್ದಾರೆ ಎಂಬ ವಿಷಯವನ್ನು ಸಭೆಯ ಗಮನಕ್ಕೆ ತರಲು, ನೀವು ಏನ್ ಮಾಡ್ತೀರ ನಂಗೊತ್ತಿಲ್ಲ. ಮಕ್ಕಳಿಗೆ ಪೋಲಿಯೋ ಡ್ರಾಪ್ ಹಾಕೋ ವಿಷಯದಲ್ಲಿ ಒಂದು ಮಗುವನ್ನು ಕಡೆಗಣಿಸಬಾರದು. ಇಲಾಖೆ ನಿಗದಿ ಪಡಿಸಿದ ಗುರಿಯನ್ನು ಸಾಧಿಸಿ. ಆದ್ರೆ, ಮಂಗನಕಾಯಿಲೆ ಬಗ್ಗೆ ನಿಗವಹಿಸಿ. ಬೀದಿನಾಯಿ, ಹಾವು ಕಡಿತಕ್ಕೆ ಅಗತ್ಯ ಔಷಧಿ ಶೇಖರಿಸಿಟ್ಟುಕೊಳ್ಳಿ. ಇಲಾಖೆ ಕುರಿತು ಸಾರ್ವಜನಕರಿಂದ ಯಾವುದೇ ದೂರು ಬರದಂತೆ ನೋಡಿಕೊಳ್ಳಿ ಎಂಬ ಸಲಹೆ ನೀಡಿದರು.

ಅಮ್ಮನಘಟ್ಟದಲ್ಲಿ ಗ್ರಾಮ ಪಂಚಾಯತಿ ಕುಡಿಯುವ ನೀರು ಸರಬರಾಜಿಗೆ ಅಳವಡಿಸಿದ್ದ ವಿದ್ಯುತ್ ಪರಿವರ್ತಕವನ್ನು ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಏಕಾಏಕೀ ಕಳೆದ ಒಂದೂವರೆ ವರ್ಷದ ಹಿಂದೆ ಕೊಂಡ್ಯೊದಿದ್ದು, ಈವರೆಗೂ ಹಿಂದಿರುಗಿಸಿಲ್ಲ. ಈ ಬಗ್ಗೆ ಪ್ರಸ್ತಾಪಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದರಿಂದ ಆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲು ತೊಂದರೆ ಆಗುತ್ತಿದೆ ಎಂದು ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು, ಕೂಡಲೇ ವಿದ್ಯುತ್ ಪರಿರ್ವತಕ ಅಳವಡಿಸಲು ಶಾಸಕ ಬೇಳೂರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಒಟ್ಟಾರೆ 14 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದು, ಒಟ್ಟು 586 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ 466 ಹುದ್ದೆಗಳಲ್ಲಿ ಶಿಕ್ಷಕರು ಕರ್ತವ್ಯ ನಿರತರಾಗಿದ್ದು, 120 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 109 ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಕಳೆದ ಬಾರಿಯ ಮಳೆಗಾಲದಲ್ಲಿ ಶಾಳೆಗೆ ನೀಡಿದ್ದ 10 ಹೆಚ್ಚುವರಿ ರಜೆಗಳನ್ನು ಮುಂಬರುವ ಪ್ರತಿ ಶನಿವಾರ ಶಾಲೆ ನಡೆಸುವ ಮೂಲಕ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಅದರೆ, ಈ ಭಾಗದ ಶಿಕ್ಷಕರು ಪ್ರತಿ ಶನಿವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಶಾಲೆ ನಡೆಸಲು ವಿನಂತಿಸಿದ್ದಾರೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಸಭೆಗೆ ವಿಷಯ ಮಂಡಿಸಲು, ಶಿಕ್ಷಕರು ಸೂಕ್ತ ವೇಳೆಯಲ್ಲಿ ಶಾಲೆಗೆ ಹಾಜರಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ಪಠ್ಯಕ್ರಮಕ್ಕೆ ಮುಂದಾದರೆ ತಮ್ಮದೇನು ಅಭ್ಯಂತರವಿಲ್ಲ ಎಂಬುದಾಗಿ ತಿಳಿಸಿದರು.

ಈ ವೇಳೆ ತಹಶೀಲ್ದಾರ್ ಭರತ್ ರಾಜ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅನ್ನಪೂರ್ಣ ನಾಗಪ್ಪ, ಮುದುಕಮ್ಮನವರ, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್. ಬಿ. ಚಿದಂಬರ, ಎಂ ಗುಡ್ಡೇಕಕೊಪ್ಪ ಗ್ರಾಮ ಪಂಚಾಯರಿ ಅಧ್ಯಕ್ಷ ಎನ್.ಜಿ.ಪ್ರವೀಣ್, ಜಯನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಮುಂಬಾರು ಗ್ರಾಮ ಪಂಚಾಯತಿ ಅಧ್ಯಕ್ಷ ಎನ್, ಕುಮಾರ್ ಸೇರಿದಂತೆ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ್, ಪ್ರವೀಣ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ್, ಸಿಡಿಪಿಒ ಗಾಯತ್ರಿ, ವಿವಿಧ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದರು.

ಗ್ರಾಮಾಭಿವೃದ್ದಿಗೆ ಸರ್ಕಾರದ ಅನುದಾನದ ಪೈಸೆಪೈಸೆಯು ಸದ್ಬಳಕೆ ಆಗಬೇಕು. ಯೋಜನೆಗೆ ಅನುಗುಣವಾಗಿ ಅನುದಾನ ಬಳಕೆ ಆಗಬೇಕು. ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಕೂಡಲೇ ಸ್ಪಂದಿಸುವಂತಿರಬೇಕು. ಯಾವುದೇ ಯೋಜನೆಗಳು ಅಧಿಕಾರಿಗಳ ಹಂತದಲ್ಲಿ ರೂಪಿತವಾಗದೇ, ಸಾರ್ವಜನಿಕರ ಸಹಭಾಗಿತ್ವದಲ್ಲಿ ರೂಪುಗೊಳ್ಳಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸುವ ಯೋಜನೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಅಭಿವೃದ್ದಿ ಕಾರ್ಯಗಳು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪೂರಕವಾಗಿರಬೇಕು ಎಲ್ಲಾ ವರ್ಗ ಹಾಗು ಸಮುದಾಯಗಳ ಬೇಡಿಕೆಗಳನ್ನು ಗ್ರಾಮ ಮಟ್ಟದಲ್ಲಿ ಚರ್ಚಿಸಿ ಯೋಜನೆ ರೂಪಿಸಿರಿ.
– ಗೋಪಾಲಕೃಷ್ಣ ಬೇಳೂರು, ಶಾಸಕ

Leave a Comment