ತೀರ್ಥಹಳ್ಳಿ: ಕಸ್ತೂರಿರಂಗನ್ ವರದಿ ಮತ್ತು ಅರಣ್ಯ ಇಲಾಖೆಯ ವಿವಿಧ ಅಧಿಸೂಚನೆಗಳಿಂದ ಮಲೆನಾಡಿನ ಜನರು ನಿರಂತರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಜನರ ಬದುಕು ಹಾಗೂ ಭೂಮಿಯ ಹಕ್ಕಿಗೆ ಎದುರಾಗಿರುವ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕಸ್ತೂರಿರಂಗನ್ ವರದಿ ಕುರಿತ ಸಂವಾದ ಮತ್ತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳಲ್ಲಿ ವಿದೇಶಿ ಹಸ್ತಕ್ಷೇಪ ಇರುವ ಕುರಿತು ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದ್ದು, ಒಂದು ವರ್ಷದೊಳಗೆ ಸಮಗ್ರ ಸರ್ವೇ ಪೂರ್ಣಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಗರ್‌ಹುಕುಂ ಸಾಗುವಳಿದಾರರ ಹಕ್ಕು ರಕ್ಷಿಸಿ
ಈಗಾಗಲೇ ಬಗರ್‌ಹುಕುಂ ಹಕ್ಕುಪತ್ರ ಪಡೆದಿರುವ ರೈತರ ಹಕ್ಕುಗಳನ್ನು ರದ್ದುಪಡಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಆತಂಕಕಾರಿ. ಶರಾವತಿ ಮುಳುಗಡೆ ಸಂತ್ರಸ್ತರಿಗೂ ಸೂಕ್ತ ಪರಿಹಾರ ಮತ್ತು ಭೂಮಿಯ ಹಕ್ಕು ನೀಡಬೇಕಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳು ಅಧಿಕೃತವಾಗಿ ಜಾರಿಯಾಗದಿದ್ದರೂ, ಅರಣ್ಯ ಇಲಾಖೆ ಹಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯಗಳಂತೆ ಪರಿಗಣಿಸುತ್ತಿದೆ. ಇದರಿಂದ ರೈತರು ಮತ್ತು ಸ್ಥಳೀಯ ನಿವಾಸಿಗಳು ಕಿರುಕುಳ ಅನುಭವಿಸುವಂತಾಗಿದೆ. ಜನರ ಬದುಕಿಗೆ ಧಕ್ಕೆಯಾಗದಂತೆ ಸರ್ಕಾರ ಸ್ಪಷ್ಟವಾದ ಕಾನೂನು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಅಡಿಕೆ ಬೆಳೆಗಾರರ ರಕ್ಷಣೆಗೆ ಕ್ರಮ ಅಗತ್ಯ
ತೀರ್ಥಹಳ್ಳಿ ಭಾಗದ ಬಹುಪಾಲು ರೈತರು ಅಡಿಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿದರೆ ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಮೂಲ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ತೀರ್ಥಹಳ್ಳಿ ಪಟ್ಟಣದ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿರುವುದನ್ನು ತಡೆಯಲು ಶೀಘ್ರದಲ್ಲೇ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ತಾಲ್ಲೂಕಿನ ಜನರ ಬಹುಕಾಲದ ಬೇಡಿಕೆಯಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೂ ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

