ತೀರ್ಥಹಳ್ಳಿ: ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಈಗಾಗಲೇ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ನೂರಾರು ವರ್ಷಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಜನರಿಗೆ ಈ ವರದಿಯಿಂದ ಅನ್ಯಾಯವಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಸ್ತೂರಿರಂಗನ್ ವರದಿ ಕುರಿತ ಸಂವಾದ ಮತ್ತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳು ಕೈಗೊಳ್ಳದ ರೀತಿಯಲ್ಲಿ ಕರ್ನಾಟಕ ಸರ್ಕಾರ ಸ್ಥಳೀಯ ಜನರ ಬಳಿಗೇ ಬಂದು ಸಮಸ್ಯೆಗಳನ್ನು ಆಲಿಸುತ್ತಿದೆ. ಮುಖ್ಯಮಂತ್ರಿಗಳು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಅವರು ಹೇಳಿದರು.
ಅಡಿಕೆ ಬೆಳೆಗಾರರ ಹಿತ ರಕ್ಷಿಸಿ
ಮಲೆನಾಡಿನ ಆರ್ಥಿಕತೆಯಲ್ಲಿ ಅಡಿಕೆ ಬೆಳೆಗೆ ಪ್ರಮುಖ ಸ್ಥಾನವಿದೆ. ಸಾವಿರಾರು ರೈತ ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿದ್ದು, ಕಸ್ತೂರಿರಂಗನ್ ವರದಿಯ ಪರಿಣಾಮದಿಂದ ಅವರ ಜೀವನೋಪಾಯಕ್ಕೆ ತೊಂದರೆಯಾಗಬಾರದು. ಅಡಿಕೆ ಬೆಳೆಯನ್ನು ಸಂರಕ್ಷಿಸಲು ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ ಗೌಡ ಒತ್ತಾಯಿಸಿದರು.
ಭೌತಿಕ ಪರಿಶೀಲನೆ ನಡೆಸದೆ ಜನವಸತಿ ಪ್ರದೇಶಗಳು, ಕೃಷಿಭೂಮಿ ಮತ್ತು ತೋಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿದರೆ ಸ್ಥಳೀಯರ ಭೂಮಿ ಹಕ್ಕು ಹಾಗೂ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಶರಾವತಿ, ಮಾಣಿ ಸಂತ್ರಸ್ತರಿಗೆ ನ್ಯಾಯ ಯಾವಾಗ?
ಶರಾವತಿ ಮತ್ತು ಮಾಣಿ ಜಲಾಶಯ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ಹಲವು ಕುಟುಂಬಗಳಿಗೆ ಈವರೆಗೂ ಸಮರ್ಪಕ ನ್ಯಾಯ ದೊರೆತಿಲ್ಲ. ದಶಕಗಳಿಂದ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತರ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು.
ಕಸ್ತೂರಿರಂಗನ್ ವರದಿ, ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿ ಹಾಗೂ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಗಣಿಸದೆ ಸಮಗ್ರವಾಗಿ ಪರಿಶೀಲಿಸಬೇಕು. ಮಲೆನಾಡಿನ ಪರಿಸರ ಸಂರಕ್ಷಣೆಯೊಂದಿಗೆ ಇಲ್ಲಿನ ಜನರ ಬದುಕು, ಕೃಷಿ ಮತ್ತು ಭೂಮಿ ಹಕ್ಕನ್ನೂ ರಕ್ಷಿಸುವ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಆರ್.ಎಂ. ಮಂಜುನಾಥ ಗೌಡ ಆಗ್ರಹಿಸಿದರು

