ಕೋಡೂರು ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಲೋಕಾಯುಕ್ತ ಇಲಾಖೆ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೋಡೂರು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ರುದ್ರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, “ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

ಅವರು ಮಾತನಾಡುತ್ತಾ, “ಸಾರ್ವಜನಿಕ ಹುದ್ದೆ ನಿರ್ವಹಿಸುವವರು ಪಾರದರ್ಶಕತೆ, ಜವಾಬ್ದಾರಿ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರವನ್ನು ಕಡಿತಗೊಳಿಸಬಹುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಾಮಾನ್ಯರು ಮಾಹಿತಿ ಹಕ್ಕು ಕಾಯ್ದೆಯ ಬಳಕೆ ಮೂಲಕ ಸರ್ಕಾರದ ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕೆ ಒತ್ತು ನೀಡಬೇಕು,” ಎಂದು ಹೇಳಿದರು.

ಇನ್ಸ್‌ಪೆಕ್ಟರ್ ರುದ್ರೇಶ್ ಅವರು ಕಾನೂನಿನ ವಿವಿಧ ಅಂಶಗಳಾದ ಲಂಚ ಸ್ವೀಕರಿಸುವುದು, ಅಧಿಕಾರ ದುರುಪಯೋಗ, ಸಾರ್ವಜನಿಕ ನಿಧಿ ದುರ್ಬಳಕೆ ಮುಂತಾದವುಗಳ ಬಗ್ಗೆ ವಿವರ ನೀಡಿ, ಪ್ರತಿ ನಾಗರಿಕನೂ ಭ್ರಷ್ಟಾಚಾರದ ವಿರುದ್ಧ ಜಾಗೃತ ನಾಗರಿಕನಾಗಿ ನಿಲ್ಲಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೋಡೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

“ಲೋಕಾಯುಕ್ತ ಇಲಾಖೆಯ ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಮಟ್ಟದ ಜನರಲ್ಲಿ ಕಾನೂನು ಅರಿವು ಹೆಚ್ಚಿಸಲು ಸಹಾಯಕವಾಗುತ್ತವೆ.”
– ಜಯಪ್ರಕಾಶ್, ಕೋಡೂರು ಗ್ರಾ.ಪಂ ಅಧ್ಯಕ್ಷ

ಆನಂತರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಸ್ಥಳೀಯ ನಾಗರಿಕರು ಗ್ರಾಮ ಪಂಚಾಯಿತಿಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ತರಲು ಅಗತ್ಯ ಕ್ರಮಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದ ಅಂತ್ಯದಲ್ಲಿ ಇನ್ಸ್‌ಪೆಕ್ಟರ್ ರುದ್ರೇಶ್ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

Leave a Comment