ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಉಡಾನ್ 6.0’ (UDAN 6.0) ಟೆಂಡರ್ ಪಟ್ಟಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಸೇರ್ಪಡೆಗೊಂಡಿದ್ದು, ಜಿಲ್ಲೆಯ ವಿಮಾನಯಾನ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಉಡಾನ್ 6.0 ಟೆಂಡರ್ ಹಾಗೂ ವಿಮಾನ ಸೇವೆ:
ಕೊನೆಯ ದಿನಾಂಕ ಮತ್ತು ಮುಕ್ತ ಅವಕಾಶ: ನಿರಂತರ ಪ್ರಯತ್ನಗಳ ಫಲವಾಗಿ ಶಿವಮೊಗ್ಗಕ್ಕೆ ಈ ಅವಕಾಶ ದೊರೆತಿದೆ. ಉಡಾನ್ 6.0 ಟೆಂಡರ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಅಥವಾ 31 ಕೊನೆಯ ದಿನವಾಗಿದೆ. ಈ ಬಾರಿ ಯಾವುದೇ ನಿರ್ದಿಷ್ಟ ಮಾರ್ಗಗಳನ್ನು ನಿಗದಿಪಡಿಸಿಲ್ಲ, ಬದಲಾಗಿ ಕಾರ್ಯಸಾಧು ಸಮೀಕ್ಷೆಯ ಆಧಾರದ ಮೇಲೆ ತಮಗೆ ಸೂಕ್ತವಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೇ ಮುಕ್ತ ಅವಕಾಶ ನೀಡಲಾಗಿದೆ.
ತಾತ್ಕಾಲಿಕ ಸೇವೆಗೆ ರಾಜ್ಯ ಸರ್ಕಾರದ ನೆರವು ಕೋರಿಕೆ:
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಫೆಬ್ರವರಿ ಅಥವಾ ಮಾರ್ಚ್‌ವರೆಗೆ ಸುಮಾರು 2 ರಿಂದ 3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಈ ಮಧ್ಯಂತರ ಅವಧಿಯಲ್ಲಿ ವಿಮಾನ ಸೇವೆ ಸ್ಥಗಿತಗೊಳ್ಳದಂತೆ ತಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು. ಶಿವಮೊಗ್ಗ–ಬೆಂಗಳೂರು ಅಥವಾ ಶಿವಮೊಗ್ಗ–ಹೈದರಾಬಾದ್ ಮಾರ್ಗದಲ್ಲಿ ತಾತ್ಕಾಲಿಕ ವಿಮಾನ ಹಾರಾಟ ನಡೆಸಲು ರಾಜ್ಯ ಸರ್ಕಾರ ‘VGF’ (Viability Gap Funding) ಅನುದಾನದ ಬೆಂಬಲ ನೀಡಬೇಕೆಂದು ಸಂಸದರು ಒತ್ತಾಯಿಸಿದರು.
ಕಮರ್ಷಿಯಲ್ ಬ್ರೇಕ್ ಇಲ್ಲ:
ಈ ಹಿಂದಿನಂತೆ ಈ ಬಾರಿ ಯಾವುದೇ ‘ಕಮರ್ಷಿಯಲ್ ಬ್ರೇಕ್’ ಎದುರಾಗಿಲ್ಲ. ಅಡೆತಡೆಯಿಲ್ಲದೆ ಮುಂದಿನ ಟೆಂಡರ್‌ಗೆ ಶಿವಮೊಗ್ಗ ಪರಿಗಣನೆಯಾಗಿರುವುದು ಸಂತಸ ತಂದಿದೆ. ಟೆಂಡರ್‌ನಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ 2-3 ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಭದ್ರಾ ಮೇಲ್ದಂಡೆ ನೀರು ಬಿಡುಗಡೆ – ಬಿಜೆಪಿ ಸರ್ಕಾರದ ಕೊಡುಗೆ:
ಹಿರಿಯೂರು ಕಾಲುವೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಂಸದರು, “ಇಂದಿನ ಬರಗಾಲದ ಪರಿಸ್ಥಿತಿಯಲ್ಲೂ ಆ ಭಾಗಕ್ಕೆ ನೀರು ತಲುಪಲು ಹಿಂದಿನ ಬಿಜೆಪಿ ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿ ಮತ್ತು ಅನುದಾನವೇ ಕಾರಣ. ಈ ಸತ್ಯವನ್ನು ನಮ್ಮ ಕಾರ್ಯಕರ್ತರು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಮುಂದಿನ ಚುನಾವಣೆ ಮತ್ತು ಎನ್‌ಡಿಎ ಒಗ್ಗಟ್ಟು:
ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವ ವಾತಾವರಣವಿದೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೂ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಆಗ್ರಹ:
ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಕೊರೆಯುವ ಚಳಿಯಲ್ಲೂ ಅವರು ಪ್ರತಿಭಟನೆ ನಡೆಸುತ್ತಿರುವುದು ನೋವಿನ ಸಂಗತಿ. ರಾಜ್ಯ ಸರ್ಕಾರ ತಕ್ಷಣವೇ ಸ್ಪಂದಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
