ಶಿವಮೊಗ್ಗ

ಭದ್ರಾ ಅಭಯಾರಣ್ಯಕ್ಕೆ ಆನೆಗಳ ಸ್ಥಳಾಂತರ ಅವೈಜ್ಞಾನಿಕ; ಸರ್ಕಾರದ ವಿರುದ್ಧ ಆರಗ ಜ್ಞಾನೇಂದ್ರ ಉಗ್ರ ಹೋರಾಟದ ಎಚ್ಚರಿಕೆ

ಹಾಸನದಿಂದ ಸುಮಾರು 47 ಆನೆಗಳ ಹಿಂಡನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದ್ದು, ಇದನ್ನು ತಕ್ಷಣ ಕೈಬಿಡದಿದ್ದರೆ ರೈತರನ್ನು ಸಂಘಟಿಸಿ ಅರಣ್ಯ ಇಲಾಖೆ ಕಚೇರಿಗೆ ಘೇರಾವ್ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

araga jnanedra 1200×675

ಶಿವಮೊಗ್ಗ: ಹಾಸನದಿಂದ ಸುಮಾರು 47 ಆನೆಗಳ ಹಿಂಡನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದ್ದು, ಇದನ್ನು ತಕ್ಷಣ ಕೈಬಿಡದಿದ್ದರೆ ರೈತರನ್ನು ಸಂಘಟಿಸಿ ಅರಣ್ಯ ಇಲಾಖೆ ಕಚೇರಿಗೆ ಘೇರಾವ್ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಮತ್ತು ಮುಂಬರುವ ಉಪಚುನಾವಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಆನೆಗಳ ಸ್ಥಳಾಂತರಕ್ಕೆ ವಿರೋಧ ಮತ್ತು ತನಿಖೆಗೆ ಆಗ್ರಹ

ಭದ್ರಾ ಅಭಯಾರಣ್ಯದಲ್ಲೇ ಈಗಾಗಲೇ ಇರುವ ಆನೆಗಳಿಗೆ ಸ್ಥಳಾವಕಾಶ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾಸನದಿಂದ ಮತ್ತಷ್ಟು ಆನೆಗಳನ್ನು ಅಲ್ಲಿಗೆ ಅಟ್ಟುವ ನಿರ್ಧಾರ ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿದರು. ಫಸಲು ಕೈಗೆ ಬರುವ ಸಮಯದಲ್ಲೇ ತೀರ್ಥಹಳ್ಳಿ, ಹೊಸನಗರ ಹಾಗೂ ಉಂಬ್ಳೆಬೈಲು ಭಾಗಗಳಿಗೆ ಆನೆಗಳು ನುಗ್ಗಿ ತೋಟ ಮತ್ತು ಬೆಳೆಗಳನ್ನು ನಾಶಪಡಿಸುತ್ತಿವೆ, ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದರು. ಆನೆ ತಡೆ ಕಂದಕ ಮತ್ತು ಬೇಲಿ ನಿರ್ಮಾಣದ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿರುವ ಶಂಕೆಯಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, “ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಬದಲಾಗಿ ಬೇಜವಾಬ್ದಾರಿ ಸರ್ಕಾರವೇ ರಾಜೀನಾಮೆ ನೀಡಲಿ” ಎಂದು ಹೇಳಿದರು.

ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಮಲೆನಾಡು ಭಾಗದಲ್ಲಿ ಆನೆಗಳ ಜೊತೆಗೆ ಚಿರತೆ ಮತ್ತು ಮಂಗಗಳ ಹಾವಳಿಯೂ ಮಿತಿಮೀರಿದೆ ಎಂದು ಆರೋಪಿಸಿದ ಅವರು, ತೀರ್ಥಹಳ್ಳಿ ಮತ್ತು ಹೊಸನಗರ ಭಾಗಗಳಲ್ಲಿ ಸಂಜೆ 6 ಗಂಟೆಯ ನಂತರ ಚಿರತೆ ಭಯದಿಂದ ಜನರು ರಸ್ತೆಗಿಳಿಯಲು ಹೆದರುವಂತಾಗಿದೆ ಎಂದರು. ಮಂಗಗಳು ಮನೆಯ ಹೆಂಚುಗಳನ್ನು ಕಿತ್ತು ಒಳನುಗ್ಗುತ್ತಿರುವುದರಿಂದ ಬಡವರು ಸಾಲ ಮಾಡಿ ಆರ್‌ಸಿಸಿ ಮನೆ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಕಾಡುಪ್ರಾಣಿಗಳ ಕಾಟಕ್ಕೆ ಬೆಚ್ಚಿ ರೈತರು ತೆಂಗು ಮತ್ತು ತರಕಾರಿ ಬೆಳೆಯುವುದನ್ನೇ ನಿಲ್ಲಿಸುವ ಹಂತಕ್ಕೆ ತಲುಪಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದರೂ ಸ್ಥಳೀಯರ ವಿರೋಧದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗಲಾದರೂ ಸರ್ಕಾರ ವನ್ಯಜೀವಿಗಳ ವೈಜ್ಞಾನಿಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು; ಇಲ್ಲದಿದ್ದರೆ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಪಂಚಾಯಿತಿ ವ್ಯಾಪ್ತಿಯ ರೈತರೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 6ನೇ ದಿನಕ್ಕೆ ಕಾಲಿಟ್ಟಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳು ವಿದೇಶ ಪ್ರವಾಸದಲ್ಲಿದ್ದರೂ ಸರ್ಕಾರ ಈವರೆಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು. ಚುನಾವಣೆಗೂ ಮುನ್ನ ‘ಆರನೇ ಗ್ಯಾರಂಟಿ’ಯಾಗಿ ಗೌರವಧನ ಹೆಚ್ಚಳದ ಭರವಸೆ ನೀಡಿದ್ದ ಸರ್ಕಾರ, ಈಗ ಕೊರೆಯುವ ಚಳಿಯಲ್ಲಿ ಮಲಗಿರುವ ಕಾರ್ಯಕರ್ತೆಯರ ಬಗ್ಗೆ ಮಾನವೀಯತೆ ತೋರಬೇಕು ಎಂದರು. ರಾಜಕೀಯ ನೇಮಕಾತಿ ಮತ್ತು ಗ್ಯಾರಂಟಿ ಸಮಿತಿಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಬೇಕಾದ 350 ರಿಂದ 400 ಕೋಟಿ ರೂಪಾಯಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹಿರಿಯೂರು ಉಪಚುನಾವಣೆಗೆ ಬಿಜೆಪಿ ಸಿದ್ಧತೆ

ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದ್ದು, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಪಕ್ಷದ ನಾಯಕರು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು. ಹಿರಿಯೂರು ಉಪಚುನಾವಣೆ ಕುರಿತು ಮಾತನಾಡಿದ ಅವರು, ಹಾಲಿ ಸರ್ಕಾರದ ಆಡಳಿತ ವೈಖರಿಯಿಂದ ಹಿರಿಯೂರು ಜನರು ಬೇಸತ್ತಿದ್ದು, ಚುನಾವಣೆ ನಡೆದರೆ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈತ್ರಿ ಟಿಕೆಟ್ ವಿಚಾರವನ್ನು ಪಕ್ಷದ ಹಿರಿಯರು ತೀರ್ಮಾನಿಸಲಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ ಎಂದರು.

ಇದೇ ವೇಳೆ, ಚುನಾವಣೆ ಸಮಯದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ನೀಡುವ ಭರವಸೆಗಳನ್ನು ಜನರು ನಂಬುವುದಿಲ್ಲ, ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆಗಳಂತೆಯೇ ಅವೂ ಹುಸಿಯಾಗುತ್ತವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]