ಶಿವಮೊಗ್ಗ: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬದುಕಿನ ಕನಸು ಕಾಣುತ್ತಿದ್ದ ಜೋಡಿಯ ಬದುಕು ಭೀಕರ ರಸ್ತೆ ಅಪಘಾತದಲ್ಲಿ ದುರಂತವಾಗಿ ಅಂತ್ಯಗೊಂಡಿದೆ. ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆದಿದ್ದ ನವದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು 28 ವರ್ಷದ ಕಿರಣ್ ಜಿ. ಹಾಗೂ 22 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಕಿರಣ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬೈಕ್‌ಗೆ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು
ಕಿರಣ್ ಮತ್ತು ಸೌಮ್ಯ ದಂಪತಿ ಶರಾವತಿ ನಗರದ ನಿವಾಸದಿಂದ ಸೌಮ್ಯ ಅವರ ತವರು ಮನೆಯಾದ ಗೋವಿಂದಪುರಕ್ಕೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಸಾಗರ ರಸ್ತೆ ಸಮೀಪದ ರಿಂಗ್‌ರೋಡ್‌ನಲ್ಲಿ ವೇಗವಾಗಿ ಬಂದ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ರಸ್ತೆಗೆ ಬಿದ್ದ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎರಡೂ ಕುಟುಂಬಗಳಲ್ಲಿ ಶೋಕದ ಛಾಯೆ
ಮದುವೆಯಾಗಿ ಕೇವಲ 45 ದಿನಗಳಷ್ಟೇ ಕಳೆದಿದ್ದ ಜೋಡಿಯ ಬದುಕು ಹೀಗೆ ದಿಢೀರನೆ ಅಂತ್ಯಗೊಂಡಿರುವುದು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ನವಜೀವನದ ಕನಸು ಕಟ್ಟಿಕೊಂಡಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರು, ಸಂಬಂಧಿಕರ ದುಃಖ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
