Accident

ಶಾಲೆಯಿಂದ ಮನೆಗೆ ಹೊರಟಿದ್ದ ಕಂದಮ್ಮನಿಗೆ ಹೆದ್ದಾರಿಯಲ್ಲಿ ಕಾದಿತ್ತು ಆಘಾತ: ಸರಣಿ ಅಪಘಾತವೆಸಗಿ ಪರಾರಿಯಾದ ಕಾರು ಚಾಲಕ!

ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಸರಣಿ ಅಪಘಾತವೆಸಗಿದ್ದು, ಶಾಲೆಯಿಂದ ಮನೆಗೆ ತೆರಳುತ್ತಿದ್ದ ಎರಡನೇ ತರಗತಿಯ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Anandapura Accident

ಸಾಗರ: ತಾಲ್ಲೂಕಿನ ಆನಂದಪುರ ಗೌರಿಕೆರೆ ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಸರಣಿ ಅಪಘಾತವೆಸಗಿದ್ದು, ಶಾಲೆಯಿಂದ ಮನೆಗೆ ತೆರಳುತ್ತಿದ್ದ ಎರಡನೇ ತರಗತಿಯ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಘಟನೆಯ ವಿವರ:

ಆನಂದಪುರ ಗ್ರಾಮದ ನಿವಾಸಿ ಎ.ಎನ್. ಪ್ರದೀಪ್ ಎಂಬುವವರ 7 ವರ್ಷದ ಪುತ್ರ ಪ್ರಥಮ್, ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನವೆಂಬರ್ 2ರ ಸಂಜೆ ಸುಮಾರು 4:45ರ ವೇಳೆಗೆ ಬಾಲಕನ ಚಿಕ್ಕಪ್ಪ ಪ್ರವೀಣ್ ಅವರು ಹೋಂಡಾ ಡಿಯೋ ಸ್ಕೂಟಿಯಲ್ಲಿ (KA15EG0737) ಬಾಲಕನನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಗೌರಿಕೆರೆ ಸರ್ಕಲ್ ಬಳಿ ಬಿ.ಹೆಚ್. ರಸ್ತೆ ದಾಟಲು ರಸ್ತೆ ಬದಿಯಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಇವರ ಹಿಂದೆಯೇ ಮಾರುತಿ ಓಮ್ನಿ ವಾಹನವೊಂದು (KA02AD1602) ಸಹ ನಿಂತಿತ್ತು.

ಅದೇ ಸಮಯದಲ್ಲಿ ಸಾಗರ ಕಡೆಯಿಂದ ಶಿವಮೊಗ್ಗ ಮಾರ್ಗವಾಗಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಮಾರುತಿ ವ್ಯಾಗ್ನರ್ ಕಾರಿನ (KA44M8764) ಚಾಲಕ, ರಸ್ತೆ ಬದಿ ನಿಂತಿದ್ದ ಓಮ್ನಿ ವಾಹನಕ್ಕೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯ ರಭಸಕ್ಕೆ ಓಮ್ನಿ ವಾಹನವು ಮುಂಭಾಗದಲ್ಲಿದ್ದ ಡಿಯೋ ಸ್ಕೂಟಿಗೆ ಅಪ್ಪಳಿಸಿದೆ.

ಚರಂಡಿಗೆ ಬಿದ್ದ ಬಾಲಕ, ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿ:

ಡಿಕ್ಕಿಯ ಹೊಡೆತಕ್ಕೆ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಯ ಅಂಚಿನಲ್ಲಿ ಬಿದ್ದಿದ್ದು, ಹಿಂಬದಿ ಕುಳಿತಿದ್ದ ಬಾಲಕ ಪ್ರಥಮ್ ಪಕ್ಕದ ಚರಂಡಿಗೆ ಬಿದ್ದಿದ್ದಾನೆ. ಪರಿಣಾಮವಾಗಿ ಬಾಲಕನ ಸೊಂಟ ಮತ್ತು ಬಲಗಾಲಿಗೆ ತೀವ್ರ ಒಳಪೆಟ್ಟಾಗಿದ್ದು, ಪ್ರವೀಣ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಮೂರೂ ವಾಹನಗಳು ಜಖಂಗೊಂಡಿವೆ. ಅಪಘಾತವೆಸಗಿದ ವ್ಯಾಗ್ನರ್ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಗೊಂಡ ಬಾಲಕನನ್ನು ತಕ್ಷಣ ಆನಂದಪುರ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಸಾಗರದ ಭಾಗವತ್ ನರ್ಸಿಂಗ್ ಹೋಂಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ಬಾಲಕನ ತಂದೆ ಪ್ರದೀಪ್ ನೀಡಿದ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ವ್ಯಾಗ್ನರ್ ಕಾರು ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]