HOSANAGARA | ತಾಲೂಕಿನ ಬಟ್ಟೆಮಲ್ಲಪ್ಪ ಬಸ್ ನಿಲ್ದಾಣದ ಹಾಗೂ ಅದರ ಬಳಿ ಇರುವ ಶೌಚಗೃಹ ಆವರಣ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ದುರ್ವಾಸನೆಯ ಕಿರಿಕಿರಿ ಅನುಭವಿಸುವಂತಾಗಿದೆ.
ನಿಲ್ದಾಣದ ಬಳಿ ಗಬ್ಬೆದ್ದು ನಾರುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಹಾಗೂ ಸಾರ್ವಜನಿಕರು ಸಂಕಟ ಪಡುವಂತಾಗಿದೆ.
ಇಲ್ಲಿನ ಬಸ್ ನಿಲ್ದಾಣದಿಂದ ನಿತ್ಯ ನೂರಾರು ಪ್ರಯಾಣಿಕರು ಸಾಗರ, ಆನಂದಪುರ, ಹೊಸನಗರ, ಶಿವಮೊಗ್ಗ ಸೇರಿದಂತೆ ವಿವಿಧೆಡೆಗೆ ಪ್ರಯಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮೂತ್ರ ಹಾಗೂ ಮಲ ವಿರ್ಸಜನೆ ಮಾಡುವುದಕ್ಕೆ ಇಲ್ಲಿನ ಶೌಚಗೃಹ ಬಳಸುವುದು ಸಾಮಾನ್ಯ. ನಿಲ್ದಾಣದ ಆವರಣ ಗಬ್ಬೆದ್ದು ನಾರುತ್ತಿರುವ ಪರಿಣಾಮ, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
ನಿಲ್ದಾಣ ಒಳ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಕಸದ ರಾಶಿ ಹೆಚ್ಚಾಗಿದೆ. ವಾರದ ಸಂತೆ ಸಹ ಇದರ ಪಕ್ಕದಲ್ಲೇ ನಡೆಯುತ್ತಿರುವುದರಿಂದ ಎಲ್ಲೆಂದರಲ್ಲಿ ಕಸ ಬಿಸಾಡಿರುವ ಪರಿಣಾಮ ಮತ್ತಷ್ಟು ಸಮಸ್ಯೆ ಎದುರಾಗಿದೆ.
ಮಳೆ ಬಂದ ಸಂದರ್ಭದಲ್ಲಿ ಮಲ ಹಾಗೂ ಮೂತ್ರದ ದುರ್ವಾಸನೆ ಹೆಚ್ಚಾಗುವುದರಿಂದ ಈ ವ್ಯಾಪ್ತಿಯಲ್ಲಿ ನಿಲ್ಲುವುದಕ್ಕೂ ಆಗುವುದಿಲ್ಲ. ನಿಲ್ದಾಣದ ಅವ್ಯವಸ್ಥೆಗೆ ಅಧಿಕಾರಗಳ ಜಾಣ ಕುರುಡತನವೇ ಕಾರಣವಾಗಿದ್ದು, ಸ್ವಚ್ಛತೆಯೊಂದಿಗೆ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಈಗಾಗಲೇ ಇಲ್ಲಿನ ಬಸ್ ನಿಲ್ದಾಣದ ಬಗ್ಗೆ ಗ್ರಾಪಂ ಗಮನ ಸೆಳೆಯಲಾಗಿದೆ. ಆದರೆ ಬಸ್ ನಿಲ್ದಾಣ, ಶೌಚಗೃಹವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಈವರೆಗೆ ಏನು ಕ್ರಮಕೈಗೊಂಡಿಲ್ಲ.
– ರಾಜು, ಸ್ಥಳೀಯ ನಿವಾಸಿ
ಈಗಿನ ಪರಿಸ್ಥಿತಿಯಲ್ಲಿ ಡೆಂಗ್ಯೂ ಇರುವುದರಿಂದ ಸೊಳ್ಳೆಗಳ ಅಡಗುದಾಣವಾಗಿ ಈ ಶೌಚಾಲಯ ಹಾಗೂ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಸಂತೆ ಮಾರುಕಟ್ಟೆ ಬಸ್ ಸ್ಟ್ಯಾಂಡ್ ಸಮೀಪವಿರುವುದರಿಂದ ಇಷ್ಟೊಂದು ಕಸ ಸಂಗ್ರಹವಾಗುತ್ತಿದೆ. ಸಂತೆ ಮಾರ್ಕೆಟ್ ಅನ್ನು ಬದಲಿ ಜಾಗಕ್ಕೆ ಸ್ಥಳಾಂತರಗೊಳಿಸಿದಲ್ಲಿ ಇದಕ್ಕೊಂದು ಪರಿಹಾರ ಸಿಗಬಹುದು.
– ಸ್ಥಳೀಯರು