Ripponpete

ಅಳಿವಿನಂಚಿನಲ್ಲಿರುವ ಮಲೆನಾಡಿನ ಆಲೆಮನೆಗೆ ಹೊಸ ಜೀವ ; ಬೆಲ್ಲ ತಯಾರಿಕಾ ಉದ್ಯಮದಿಂದ ಕೃಷಿಕರಿಗೆ ಆರ್ಥಿಕ ಪುನರುಜ್ಜೀವನ

ರಿಪ್ಪನ್‌ಪೇಟೆ ; ಮಲೆನಾಡಿನ ಗ್ರಾಮೀಣ ಜನರ ಜೀವನಾಡಿಯಾಗಿದ್ದ ಆಲೆಮನೆಗಳು ಒಂದು ಕಾಲದಲ್ಲಿ ಕೇವಲ ಉತ್ಪಾದನಾ ಕೇಂದ್ರಗಳಷ್ಟೆ ಅಲ್ಲ ಸಾಮಾಜಿಕ-ಸಾಂಸ್ಕೃತಿಕ ಕೊಡುವಿಕೆಗೆ ವೇದಿಕೆಯಾಗಿದ್ದವು. ಬೆಳಗಿನ-ರಾತ್ರಿ ತಂಪಿನ ಹೊತ್ತಿನಲ್ಲಿ ಕೋಣಗಳ ಗಾಣದ ಸುತ್ತಿ ಕಬ್ಬಿನ ಹಾಲಿನ ಸುವಾಸೆನೆ ಹರಡುತ್ತಾ ಕೊಪ್ಪರಿಗೆಯಲ್ಲಿ ಕುದಿಯುತ್ತಿದ್ದ ಬೆಲ್ಲದ ಸಿಹಿತನ ಗ್ರಾಮೀಣ ಬದುಕಿಗೆ ವಿಶೇಷ ರಂಗು ತುಂಬುತ್ತಿತ್ತು.

WhatsApp Group Join Now
Telegram Group Join Now
Instagram Group Join Now

ಕಬ್ಬಿನ ಹಾಲು ಕುಡಿಯಲು ನೊರೆಬೆಲ್ಲ (ಹೊಸಬೆಲ್ಲ) ಸವಿಯಲು ಜನರು ಸಾಲುಗಟ್ಟಿ ನಿಂತ ದೃಶ್ಯಗಳು ಈಗ ನೆನಪಿನ ಪುಟಗಳಲ್ಲಿ ಮಾತ್ರ ಉಳಿದಂತಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪಾರಂಪರಿಕ ಉದ್ಯಮ ಮತ್ತು ಚೇತರಿಸಿಕೊಳ್ಳುತ್ತಿರುವುದು ರೈತ ಸಮುದಾಯಕ್ಕೆ ಸಂತಸದ ಸುದ್ದಿ.

ಯಾಂತ್ರೀಕರಣದ ಹೊಡೆತ-ಪಾರಂಪರಿಕ ಆಲೆಮನೆಗಳ ಕುಸಿತ ಹಿಂದಿನ ದಿನಗಳಲ್ಲಿ ಕಬ್ಬು ಲಾಭದಾಯಕ ಬೆಳೆಯಾಗಿದ್ದು ಹಳ್ಳಿಗಳಲ್ಲಿ ಕೋಣಗಳನ್ನು ಕಟ್ಟಿ ಗಾಣದಲ್ಲಿ ಕಬ್ಬು ನುರಿದು ಕಬ್ಬಿನ ಹಾಲನ್ನು ಕುದಿಸಿ ಬೆಲ್ಲ ತಯಾರಿಸುವ ಪದ್ದತಿ ಸಾಮಾನ್ಯವಾಗಿತ್ತು. ಆದರೆ ಕಾಲಕ್ರಮೇಣ ಯಾಂತ್ರಿಕರಣದ ಪ್ರಭಾವ ಹೆಚ್ಚಾಗಿ ಟ್ರ್ಯಾಕ್ಟರ್‌ಗಳು, ಕ್ರಷರ್ (ಯಂತ್ರ ಗಾಣಗಳು) ಆಲೆಮನೆಗಳನ್ನು ಬದಲಾಯಿಸಿದವು. ರೈತರು ತಮ್ಮ ಅಲ್ಪ ಪ್ರಮಾಣದ ಕಬ್ಬನ್ನು ವಾಹನಗಳಲ್ಲಿ ತುಂಬಿಕೊಂಡು ಯಂತ್ರ ಗಾಣಗಳಿಗೆ ಕೊಂಡೊಯ್ಯುವ ಪದ್ದತಿಗೆ ಒಲಿಯಲಾರಂಭಿಸಿದರು.

ಇದರ ಜೊತೆಗೆ ಯುವ ಪೀಳಿಗೆ ಕೃಷಿಯಿಂದ ದೂರ ಸರಿಯುವ ಪ್ರವೃತ್ತಿ ಹೆಚ್ಚಾದ ಪರಿಣಾಮ ಪಾರಂಪರಿಕ ಆಲೆಮನೆಗಳು ಕ್ರಮೇಣ ಕುಂಠಿತಗೊಂಡವು.ಆನೇಕ ಗಾಣಗಳು ಜಂಗು ಹಿಡಿದು ನಿಂತ ದೃಶ್ಯಗಳು ಸಾಮಾನ್ಯವಾಗಿದ್ದವು.

ಆರ್ಥಿಕ ಬೆಳೆಗಳ ಆಕರ್ಷಣೆ – ಪಾರಂಪರಿಕ ಬೆಳೆಗಳಿಗೆ ಹಿನ್ನಡೆ ;

ಹವಾಮಾನ ಬದಲಾವಣೆ ಹಾಗೂ ಮಾರುಕಟ್ಟೆಯ ಪ್ರಭಾವದಿಂದ ರೈತರು ಭತ್ತ, ಕಬ್ಬು, ದ್ವಿದಳ ಧಾನ್ಯ ಮುಂತಾದ ಪರಂಪರೆಯ ಬೆಳೆಗಳನ್ನು ಬಿಟ್ಟು ಶುಂಠಿ, ಅಡಿಕೆ, ರಬ್ಬರ್, ಅಕೇಶಿಯ, ನೀಲಗಿರಿ ಮುಂತಾದ ಆರ್ಥಿಕ ಬೆಳೆಗಳತ್ತ ಮುಖ ಮಾಡಿದರು. ಕೆಲ ವರ್ಷಗಳಲ್ಲಿ ಶುಂಠಿ ಬೆಳೆಗಾರರು ಲಕ್ಷಾಧೀಶರು ಕೋಟ್ಯಧೀಶರಾಗುವ ಮಟ್ಟಕ್ಕೆ ಲಾಭ ಕಂಡರೂ ಬೆಲೆ ಕುಸಿತ ಮತ್ತು ರೋಗಬಾಧೆಯಿಂದ ಅನೇಕರು ನಷ್ಟ ಅನುಭವಿಸಿದರು.

ಅಡಿಕೆ, ಕಾಳುಮೆಣಸು ಬೆಳೆಗಳಲ್ಲಿಯೂ ಬೆಲೆ ಏರಿಳಿತದಿಂದ ಖರ್ಚು ಮಾಡಿದ ಹಣವೂ ಮರಳಿ ಸಿಗದ ಪರಿಸ್ಥಿತಿ ಉಂಟಾಯಿತು. ಈ ಹಿನ್ನಲೆಯಲ್ಲಿ ರೈತರು ಮತ್ತು ಪಾರಂಪರಿಕ ಕೃಷಿಯತ್ತ ಚಿತ್ತ ಹರಿಸುವ ಪರಿಸ್ಥಿತಿ ನಿರ್ಮಾಣವಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಕಬ್ಬಿಗೆ ಬಂಪರ್ ಬೆಲೆ ;

ರೈತರ ಆಶಾಕಿರಣ ಕೆಳೆದ ಎರಡ್ಮೂರು ವರ್ಷಗಳಿಂದ ಕಬ್ಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸುತ್ತಿದೆ. ಒಂದು ಟನ್ ಕಬ್ಬಿಗೆ 6000 ದಿಂದ 7000 ರೂ. ವರೆಗೆ ಬೆಲೆ ಸಿಗುತ್ತಿರುವುದು ರೈತರಲ್ಲಿ ಉತ್ಸಾಹ ತುಂಬಿದೆ. ಜಾತ್ರಾ ಮಹೋತ್ಸವಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಬ್ಬಿನ ಹಾಲಿಗೆ ಹೆಚ್ಚಿದ ಬೇಡಿಕೆಯೂ ಕಬ್ಬು ಬೆಳೆಗಾರರಿಗೆ ಲಾಭದಾಯಕವಾಗಿದೆ. ವಿಶೇಷವಾಗಿ ಸಾಗರ, ಹೊಸನಗರ, ಶಿರಸಿ, ಆನಂದಪುರ ಮತ್ತು ಶಿವಮೊಗ್ಗ-ತೀರ್ಥಹಳ್ಳಿ ಪ್ರದೇಶಗಳಲ್ಲಿ ಜಾತ್ರೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಕಬ್ಬಿನ ಹಾಲಿಗೆ ಅಪಾರ ಬೇಡಿಕೆ ಇದೆ ವಿಶೇಷವಾಗಿ ಮಾರಿಕಾಂಬಾ ಜಾತ್ರೆ ಸಮಯದಲ್ಲಿ ಕಬ್ಬಿನ ಹಾಲಿನ ವ್ಯಾಪಾರ ಗರಿಗೆದರಿರುವುದು ಗಮನಾರ್ಹ. ಇದರಿಂದಾಗಿ ಕೆಲವರು ಆಲೆಮನೆ ನಡೆಸುವುದಕ್ಕಿಂತ ನೇರವಾಗಿ ಕಬ್ಬು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಬ್ಬಿನಿಂದ ಗುಣಮಟ್ಟದ ಬೆಲ್ಲತಯಾರಿಸಿ ಹೆಚ್ಚುವರಿ ಲಾಭ ಪಡೆಯುತ್ತಿದ್ದಾರೆ.

ದೇಶಿಯ ಬೆಲ್ಲಕ್ಕೆ ಹೆಚ್ಚಿದ ಮಾರುಕಟ್ಟೆ ;

ಸಮೀಪದ ಬೈರಾಪುರ ಸಿದ್ದೇಶ್ವರ ಶ್ರೀರಾಘವೇಂದ್ರ ಸ್ವಾಮಿ ಮಠದ ಬಳಿಯಲ್ಲಿ ಸಾವಯವ ಪದ್ದತಿಯಲ್ಲಿ ಜೆ.ಕೆ. ಫುಡ್ಸ್ ಬೆಲ್ಲದ ತಯಾರಿಕಾ ಘಟಕವನ್ನು ಶಿವಮೊಗ್ಗದ ಲೋಕೇಶ ಹಾಗೂ ಕೆರೆಹಳ್ಳಿ ದೇವರಾಜ್ ಆಲೆಮನೆಯನ್ನು ಆರಂಭಿಸುವುದರೊಂದಿಗೆ ಸ್ವದೇಶಿ ಬ್ರಾಂಡಿನಲ್ಲಿ ಬೆಲ್ಲವನ್ನು ವಿವಿಧ ಬಗೆಯಲ್ಲಿ ಉತ್ಪಾಧಿಸುವ ಮಲೆನಾಡಿನ ಕೃಷಿಕರಿಗೆ ವರದಾನವಾಗಿ ರೈತರಿಂದ ಖರೀಸಲಾದ ಕಬ್ಬಿನಿಂದ ಬಗೆಬಗೆ ಸಿದ್ದಪಡಿಸಲಾದ ಬೆಲ್ಲಕ್ಕೆ ಬೇಡಿಕೆ ಬರಲಾರಂಭಿಸಿದ್ದು ರೈತರು ವರ್ಷವಿಡಿ ಕಬ್ಬನ್ನು ತಂದು ಕೊಟ್ಟರೆ ಒಳ್ಳೆಯ ಬೆಲೆಯು ಸಿಗುವುದರೊಂದಿಗೆ ಅರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುವುದೆಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಬ್ಬಿನ ಬಿತ್ತನೆ ಬೀಜವನ್ನು ಕಂಪನಿಯಿಂದಲೇ ನೀಡುತ್ತೇವೆ ;

ಸುತ್ತಮುತ್ತಲಿನ ಗ್ರಾಮಗಳಲ್ಲಿನ ರೈತರು ಕಬ್ಬು ಬೆಳೆಯನ್ನು ಬೆಳೆಯಲು ಸಹ ಬೀಜವನ್ನು ನೀಡುತ್ತೇವೆ. ಇದು ಮೂರುವರ್ಷ ಕಾಲ ಬೆಳೆ ಬರುವ ತಳಿಯದಾಗಿದ್ದು ಒಂದು ಭಾರಿ ನಾಟಿ ಮಾಡಿದರೆ ಮೂರು ವರ್ಷಗಳ ಕಾಲ ಬೆಳೆ ಬರುತ್ತಿರುತ್ತದೆ. ಇದಕ್ಕೆ ರೈತರು ಶ್ರಮ ಪಡುವ ಅಗತ್ಯ ಇಲ್ಲ ಗೊಬ್ಬರ ಮತ್ತು ನೀರು ಹರಿಸುತ್ತಿದ್ದರೆ ಸಾಕು ಈ ಸೌಲಭ್ಯವನ್ನು ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೂ ಹತ್ತಿರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ಸಹ ಸಹಕಾರಿಯಾಗುವುದರೊಂದಿ ಅರ್ಥಿಕ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ.

ಕೃಷಿ ಅನುಭವ ಸಾಕು ;

ಜೆ.ಕೆ.ಪುಡ್ಸ್ ಬೆಲ್ಲದ ತಯಾರಿಕಾ ಘಟಕದಲ್ಲಿ ಕೆಲಸಗಾರರಿಗೆ ವಿದ್ಯಾರ್ಹತೆಯ ಅಗತ್ಯವಿಲ್ಲ ಕಬ್ಬನ್ನು ಯಂತ್ರಕ್ಕೆ ಹಾಕುವ ಮುನ್ನ ನೀರಿನಲ್ಲಿ ಶುಚಿಗೊಳಿಸುವುದು ಮತ್ತು ತಯಾರಾದ ಬೆಲ್ಲವನ್ನು ಕ್ಯಾನ್ ಡಬ್ಬಿಗಳಿಗೆ ತೂಕ ಮಾಡಿ ತುಂಬುವುದು ಇದಕ್ಕೆ ಯಾವುದೇ ವಿದ್ಯಾರ್ಹತೆಯ ಅಗತ್ಯ ಬೇಡ ಅನುಭವವೇ ಸಾಕು ಎನ್ನುತ್ತಾರೆ ಇಲ್ಲಿನ ಕಾರ್ಮಿಕರಾದ ರೇಣುಕಾ ಭೀಮರಾಜ್
ಕಬ್ಬು ಹಾಗೂ ಬೆಲ್ಲ ಉದ್ಯಮದ ಚೇತರಿಕೆಯಿಂದ ರೈತರ ಅದಾಯ ದ್ವಿಗುಣವಾಗುವುದು. ಗ್ರಾಮೀಣ ಅರ್ಥಿಕತೆಯ ಪುನರುಜ್ಜೀವನಕ್ಕೆ ಇದು ನಿರ್ದೇಶನವಾಗುತ್ತಿದೆ. ಸರ್ಕಾರವೂ ಪಾರಂಪರಿಕ ಬೆಳೆಗಳಿಗೆ ಪ್ರೋತ್ಸಾಹ ಹಾಗು ಮಾರುಕಟ್ಟೆ ವ್ಯವಸ್ಥೆ ಬಲಪಡಿಸಿದರೆ ಮಲೆನಾಡಿನ ಆಲೆಮನೆಗಳು ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯವ ಸಾಧ್ಯತೆ ಇದೆ. ಪಾರಂಪರಿಕ ಸಿಹಿತನ ಮತ್ತೆ ಮಲೆನಾಡಿನ ಮಣ್ಣಿನಲ್ಲಿ ಅರಳುವಂತೆ ರೈತ ಸಮೂಹ ಸಹಕರಿಸುವಂತಾಗಬೇಕು ಎಂಬ ಆಶಾಭಾವನೆ ನಮ್ಮದಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]