ಹೊಸನಗರ ; ತಾಲೂಕಿನಲ್ಲಿ ಈ ಬಾರಿ ಮುಂಗಾರು ಚುರುಕಾಗಿದ್ದು, ರಾಜ್ಯದಲ್ಲಿ ಅಲ್ಲಲ್ಲಿ ಕೋವಿಡ್ ಪತ್ತೆಯಾಗಿದೆ. ಮಳೆಯಿಂದ ಕೆಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾದ ವರದಿ ಪ್ರಕಟವಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕೋವಿಡ್ ಪತ್ತೆಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿ ರೋಗ ಹರಡದಂತೆ ಜಾಗೃತಿ ವಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೋವಿಡ್ ಹಾಗೂ ವಿಪತ್ತು ನಿರ್ವಹಣೆ ಮುಂಜಾಗ್ರತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕು. ಸೊಳ್ಳೆ ಹರಡದಂತೆ ಎಚ್ಚರ ವಹಿಸಿ. ಮಳೆ ನೀರು ಸಂಗ್ರಹವಾಗದಂತೆ ಎಳನೀರು ಚಿಪ್ಪು, ರಬ್ಬರ್ ಟೈರ್ ಟ್ಯೂಬ್‌ಗಳನ್ನು ವಿಲೇವಾರಿ ಮಾಡಿ, ಮಕ್ಕಳ ಆರೋಗ್ಯ ಕುರಿತು ಎಚ್ಚರ ವಹಿಸಿ. ಯಾವುದೇ ಆರೋಗ್ಯ ರಕ್ಷಕ ಸನ್ನಿವೇಶ ಎದುರಿಸಲು ಸನ್ನದ್ಧರಾಗಿರುವಂತೆ ಅವರು ಅಧಿಕಾರಿ ವರ್ಗಕ್ಕೆ ಸೂಚಿಸಿದರು.
ಸಾಗರ ಕ್ಷೇತ್ರದಲ್ಲಿ ಮಳೆಯಿಂದ ಒಟ್ಟಾರೆ 21 ಮನೆಗಳಿಗೆ ಹಾನಿಯಾಗಿದೆ. ಒಟ್ಟು 9 ಅಧಿಕೃತ ಹಾಗೂ 12 ಅನಧಿಕೃತ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ತಹಶಿಲ್ದಾರ್ ರಶ್ಮಿ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ನರೇಂದ್ರ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಚಿದಂಬರ, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ದುಮ್ಮ ವಿನಯ್ ಕುಮಾರ್, ಶ್ರೀಧರ್ ಕೃಷ್ಣಪ್ಪ, ಸಿಂಥಿಯಾ ಸೆರಾವೋ, ಜಯನಗರ ಗೋಪಿನಾಥ್, ಇಕ್ಬಾಲ್, ವೈದ್ಯಾಧಿಕಾರಿ ಗುರುಮೂರ್ತಿ, ಡಾ. ಲಿಂಗರಾಜ್, ಡಾ.ಸುರೇಶ್, ಬಿಇಒ ಕೃಷ್ಣಮೂರ್ತಿ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ್, ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.