ಮಳೆಗಾಲದಲ್ಲಿ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಿ ; ಅಧಿಕಾರಿಗಳಿಗೆ ಶಾಸಕ ಬೇಳೂರು ತಾಕೀತು

Written by malnadtimes.com

Published on:

HOSANAGARA | ತಾಲ್ಲೂಕಿನ ಎಲ್ಲ ಅಧಿಕಾರಿಗಳು ಕೆಲಸಕ್ಕೆ ರಜೆ ಹಾಕದೆ ಮಳೆಗಾಲದ ಮೂರು ತಿಂಗಳುಗಳ ಕಾಲ ಜನ ಸೇವೆ ಮಾಡಬೇಕು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಲ್ಲಿ ಸದಾ ಜನರಿಗೆ ಲಭ್ಯವಿದ್ದು, ಅವಘಡಗಳ ಸಂದರ್ಭದಲ್ಲಿ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ (Beluru Gopalakrishna) ತಾಕೀತು ಮಾಡಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ :

ಮಲೆನಾಡಿನಲ್ಲಿ ಮಳೆ ಅವಾಂತರಗಳು ನಡೆಯುತ್ತಿರುತ್ತವೆ. ಹಲವು ಸಂದರ್ಭಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಸಕಾಲದಲ್ಲಿ ಸ್ಥಳ ಪರಿಶೀಲನೆ ನಡೆಸದೇ ವರದಿ ಸಲ್ಲಿಸಲು ನಿರ್ಲಕ್ಷ್ಯ ವಹಿಸಿದಲ್ಲಿ ಸಂತ್ರಸ್ಥರಿಗೆ ನಷ್ಟ ಪರಿಹಾರ ಲಭ್ಯವಾಗುವುದಿಲ್ಲ. ಅವಘಡಗಳು ನಡೆದಾಗ 10 ಸಾವಿರ ರೂ.ಗಳನ್ನು ಸಂತ್ರಸ್ಥರಿಗೆ ತಕ್ಷಣವೇ ನೀಡಬೇಕು. ಕೆಲ ಸಿಬ್ಬಂದಿಗಳು ಸ್ಥಳದಲ್ಲಿ ವಾಸವಿಲ್ಲದೆ, ಜಿಲ್ಲಾ ಕೇಂದ್ರದಲ್ಲಿರುವುದು ಗಮನಕ್ಕೆ ಬಂದಿದೆ. ಆದರೆ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಅನಿವಾರ‍್ಯವಾಗಲಿದೆ ಎಂದರು.

ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸಲು ಸೂಚನೆ :

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳನ್ನು ಆದ್ಯತೆಯ ಮೇರೆಗೆ ಬಳಸಿಕೊಳ್ಳಬೇಕು. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಬೇಕು ಎಂದ ಅವರು, ಮೂಲಸೌಕರ್ಯ ಕೊರತೆ ಇರುವ ಶಾಲೆಗಳ ಪಟ್ಟಿ ತಯಾರಿಸಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಸೂಚಿಸಿದರು.

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ :

ತಾಲೂಕಿನಲ್ಲಿ 14 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ರಿಪ್ಪನ್‌ಪೇಟೆ ಭಾಗದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ್‌ರವರು ಸಭೆಗೆ ಮಾಹಿತಿ ನೀಡಿದರು. ಸೊಳ್ಳೆಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಶಾಸಕರು ಸೂಚನೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಉತ್ತಮ ವ್ಯವಸ್ಥೆ ಕೈಗೊಳ್ಳಿ :

ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯವಾಗಿರುವ ಫುಡ್‌ಕೋರ್ಟ್ ನಿರ್ಮಾಣಕ್ಕೆ ಸೂಕ್ತವಾದ ಜಾಗ ಅಂತಿಮಗೊಳಿಸುವ ಅಗತ್ಯವಿದೆ. ಪಟ್ಟಣ ಪಂಚಾಯಿತಿ ಜಾಗದಲ್ಲಿ ಅವರಿಗೆ ಉತ್ತಮ ವ್ಯವಸ್ಥೆ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.

ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹೊಸನಗರ ತಾಲ್ಲೂಕಿನ ರೆವಿನ್ಯೂ ಇನ್ಸ್ಪೇಕ್ಟರ್‌ಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯತಿಯ ಪಿಡಿಓಗಳು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Leave a Comment