ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಈಡೇರದ ಹಿನ್ನೆಲೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಗಸ್ಟ್ 4ರ ಬೆಳಿಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪಿರುವುದರಿಂದ ಕ್ಷೇತ್ರದ ಜನರು, ಪಕ್ಷದ ಮುಖಂಡರು ಹಾಗೂ ಬೆಂಬಲಿಗರು ಬೇಸರಗೊಂಡಿದ್ದಾರೆ ಎಂದು ಹೇಳಿದರು.
“ಈ ರೀತಿಯ ಅನ್ಯಾಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಮ್ಮ ತಾಲೂಕಿನ ಜನರು ಮತ್ತು ಮುಖಂಡರು ತೀವ್ರ ಬೇಸರದಲ್ಲಿದ್ದಾರೆ. ಅವರ ಅಭಿಪ್ರಾಯವನ್ನು ಗೌರವಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಸಾಮಾನ್ಯ ಶಾಸಕರಿಗೆ ಅವಕಾಶ ಇಲ್ಲವೇ?
ಹಿಂದೆ ಕೆಲವರಿಗೆ ಮೂರು ವರ್ಷಗಳವರೆಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ತಮಗೂ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಜಕೀಯವಾಗಿ ಪ್ರಬಲರಾಗಿರುವವರಿಗೆ ಅಥವಾ ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರ ಕುಟುಂಬದವರಿಗೆ ಮಾತ್ರ ಆದ್ಯತೆ ಸಿಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾನ್ಯ ಹಿನ್ನೆಲೆಯಿಂದ ಬಂದ ಶಾಸಕರಿಗೆ ಸಚಿವರಾಗಿ ಜನಸೇವೆ ಮಾಡುವ ಅವಕಾಶ ಸಿಗಬಾರದೇ ಎಂದು ಪ್ರಶ್ನಿಸಿದ ಅವರು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ತಮ್ಮನ್ನು ಪರಿಗಣಿಸದಿರುವುದು ಬೇಸರ ತಂದಿದೆ ಎಂದರು.
‘ಬಂಗಾರಪ್ಪ ಗರಡಿಯಲ್ಲಿ ಬೆಳೆದವನು’
ತಾವು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದಿದ್ದು, ಹಿಂದುಳಿದ ವರ್ಗದ ಹಿನ್ನೆಲೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೂ ಸಚಿವ ಸ್ಥಾನ ನೀಡದಿರುವುದು ನಿರಾಸೆ ಮೂಡಿಸಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯ ಸೋಲಿಗೆ ಸಂಬಂಧಿಸಿದ ವಾಸ್ತವ ಸಂಗತಿಗಳು ಪಕ್ಷದ ನಾಯಕರಿಗೆ ಗೊತ್ತಿದ್ದರೂ, ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಸಚಿವ ಸ್ಥಾನ ತಪ್ಪಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಬೆಂಬಲಿಗರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ
ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂರು ಬಾರಿ ಶಾಸಕರಾದವರನ್ನು ಕಡೆಗಣಿಸಿ ಯಾರಿಗೆ ಅವಕಾಶ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಕ್ಷೇತ್ರದ ಜನರು, ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿದ ಬಳಿಕ ಆಗಸ್ಟ್ 4ರ ಬೆಳಿಗ್ಗೆ ಶಾಸಕ ಸ್ಥಾನ ಹಾಗೂ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.