ರಿಪ್ಪನ್‌ಪೇಟೆ : ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಹಳ್ಳಿ ಹೋಬಳಿಯ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್ ಅನ್ನು ಸ್ಮಾಟ್ ವೃತ್ತವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಮಾಡಲಾಗಿದ್ದು ಇದರ ಅಭಿವೃದ್ದಿಗಾಗಿ ಈಗಾಗಲೇ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚುವರಿಯಾಗಿ 1.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಮಳೆಗಾಲದ ಕಾರಣ ಕಾಮಗಾರಿ ವಿಳಂಬವಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ ನೀಡಿದರು.
ರಿಪ್ಪನ್‌ಪೇಟೆಯಲ್ಲಿ ಶುಕ್ರವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಳೆಗಾಲದ ಕಾರಣ ರಸ್ತೆಗಳಲ್ಲಿ ಹೊಂಡ-ಗುಂಡಿಗಳು ಬಿದ್ದು ವಾಹನ ಸಂಚಾರ ಮಾಡದಂತಾಗಿದೆ. ಶೀಘ್ರದಲ್ಲಿ ಹೊಂಡ-ಗುಂಡಿಗಳನ್ನು ಮುಚ್ಚುವ ಕಾರ್ಯ ಚುರುಕುಗೊಳಿಸಲಾಗುವುದೆಂದು ತಿಳಿಸಿದ ಅವರು, ಶಿವಮೊಗ್ಗ-ಹೊಸನಗರ ಮಾರ್ಗದ ರಾಜ್ಯ ಹೆದ್ದಾರಿ ಸೂಡೂರಿನಿಂದ ಹೊಸನಗರದ 21 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ 21 ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಹೆಚ್ಚು ಹಾಳಾದ ಕಡೆಯಲ್ಲಿ ರಸ್ತೆಯ ಕಾಮಗಾರಿ ಮಾಡಲಾಗುವುದೆಂದು ಹೇಳಿದರು.
ಇನ್ನೂ ಸಾಗರ-ತೀರ್ಥಹಳ್ಳಿ ಮಾರ್ಗದ ರಿಪ್ಪನ್‌ಪೇಟೆ ವಿನಾಯಕ ವೃತ್ತದಿಂದ ತಲಾ ಒಂದು ಕಿ.ಮೀ. ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡಲು 5.85 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿ ಕಾಮಗಾರಿ ನಡೆಯುತ್ತಿದೆ. ಮಳೆಯಿಂದಾಗಿ ಅಲ್ಪಸ್ವಲ್ಪ ಕಾಮಗಾರಿ ಬಾಕಿ ಉಳಿದಿದ್ದು ಆ ಕಾಮಗಾರಿ ಮಾಡಬೇಕಾಗಿದೆ. ರಸ್ತೆ ಅಂಚಿನಲ್ಲಿ ಪಾದಚಾರಿಗಳಿಗಾಗಿ ಇಂಟರ್‌ಲಾಕ್ ಅಳವಡಿಕೆ ಕಾರ್ಯ ಸಾಗಿದೆ. ಉಳಿದಂತೆ ವಿನಾಯಕ ವೃತ್ತದಿಂದ ಶಿವಮೊಗ್ಗ ರಸ್ತೆಯ ಶಿವಮಂದಿರದವರೆಗೆ ಒಂದು ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಮಾಡುವ ಮೂಲಕ ವಿನಾಯಕ ವೃತ್ತದಲ್ಲಿ 5 ಲಕ್ಷ ರೂ. ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ ಹಾಗೂ ರಸ್ತೆ ವಿಸ್ತರಣೆ ಮಾಡುವುದರೊಂದಿಗೆ ಆಟೋ ನಿಲುಗಡೆಗೆ ಪ್ರತ್ಯೇಕ ಸ್ಟ್ಯಾಂಡ್ ನಿರ್ಮಾಣ ಮತ್ತು ಸಾಗರ-ಶಿವಮೊಗ್ಗ, ತೀರ್ಥಹಳ್ಳಿ – ಹೊಸನಗರ ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಯ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಮಾಡಲಾಗಿದೆ. ಇನ್ನೊಂದು ಬೆಟ್ಟನಕೆರೆ ಮತ್ತು ಬೆಳಕೋಡು ಸಂಪರ್ಕದ ರಸ್ತೆಯನ್ನು ಸಿಸಿ ರಸ್ತೆ ಮಾಡುವಂತೆ ಸೂಚಿಸಿದ ಅವರು, ಕೆರೆಹಳ್ಳಿ ರಾಮೇಶ್ವರ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.
ಒಟ್ಟಾರೆಯಾಗಿ ನನ್ನ ಸಂಕಲ್ಪ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯಾಗಿದ್ದು ಸರ್ಕಾರದಿಂದ ಎಷ್ಟು ಅನುದಾನವನ್ನು ತರಲು ಸದಾ ಸಿದ್ದವಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡ ಆರ್.ಎ.ಚಾಬುಸಾಬ್, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ ಹಾರೋಹಿತ್ತಲು, ಗ್ರಾಮ ಪಂಚಾಯಿತ್ ಸದಸ್ಯ ಡಿ.ಈ.ಮಧುಸೂದನ್, ಉಮಾಕರ, ಕೆ.ದೇವರಾಜ, ರವೀಂದ್ರ ಕೆರೆಹಳ್ಳಿ, ಶ್ರೀಧರ, ಜಿ.ಆರ್.ಗೋಪಾಲಕೃಷ್ಣ, ಸಣ್ಣಕ್ಕಿ ಮಂಜು, ರಮೇಶ ಫ್ಯಾನ್ಸಿ, ಇನ್ನಿತರ ಮುಖಂಡರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





