ಭದ್ರಾವತಿ: ಕಡವೆಯನ್ನು ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಎಂ.ಸಿ. ಹಳ್ಳಿ ಶಾಖೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳ ಬಳಿಯಿಂದ ಸುಮಾರು 70 ಕೆ.ಜಿ. ಕಡವೆ ಮಾಂಸ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಬೇಟೆಗೆ ಬಳಸಲಾಗಿದೆ ಎನ್ನಲಾದ ಒಂದು ನಾಡಬಂದೂಕು, ದ್ವಿಚಕ್ರ ವಾಹನ, ಕತ್ತಿ, ಚಾಕು, ಚೂರಿ ಹಾಗೂ ಹಣೆ ಬ್ಯಾಟರಿ ಸೇರಿದಂತೆ ಹಲವು ವಸ್ತುಗಳನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಮುಂದಿನ ಕಾನೂನು ಕ್ರಮದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಹಾಗೂ ತರೀಕೆರೆ ಉಪ ವಿಭಾಗದ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಲಕ್ಕವಳ್ಳಿ ವಲಯ ಅರಣ್ಯ ಅಧಿಕಾರಿ ಇಂದು ಜಿ.ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಚನ್ನೇಗೌಡ ಜಿ.ಟಿ., ಮನೋಜ್ ಕೆ.ಎಸ್., ಗಸ್ತು ಅರಣ್ಯ ಪಾಲಕರಾದ ಸಂತೋಷ್ ಎಂ.ಬಿ., ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಶೋಭಾ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

