ಶಿವಮೊಗ್ಗ: ಭದ್ರಾವತಿ ತಾಲೂಕಿನ ಶಂಕರಘಟ್ಟದಿಂದ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
2018ರಲ್ಲಿ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದ ಪೊಲೀಸರು, ವಿವಿಧ ಸುಳಿವುಗಳ ಆಧಾರದ ಮೇಲೆ ಪರಿಶೀಲನೆ ನಡೆಸಿ, ಹೊಸಪೇಟೆಯಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.
ಡಿವೈಎಸ್ಪಿ ಪ್ರಕಾಶ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್ ಚಿದಾನಂದ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಪತ್ತೆಯಾದ ವ್ಯಕ್ತಿಯನ್ನು ಸುರಕ್ಷಿತವಾಗಿ ಭದ್ರಾವತಿಗೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮತ್ತೆ ಮನೆಗೆ ಮರಳಿರುವುದರಿಂದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದೀರ್ಘಕಾಲ ಬಾಕಿ ಉಳಿದಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಭದ್ರಾವತಿ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಪೊಲೀಸರು ಮುಂದಿನ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

