ಸಾಗರ ; ಗ್ರಾಮಾಂತರ ಪ್ರದೇಶದಲ್ಲಿ ಟಿಸಿ ಕೊರತೆ ನೀಗಿಸುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಜಿಲ್ಲೆಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು, ಜನಸಾಮಾನ್ಯರ ಕಂಗಾಲಾಗಿದ್ದಾರೆ. ಬಹುವಾರ್ಷಿಕ ಬೆಳೆಗಳು ನೀರಿನ ಅಭಾವದಿಂದ ಸಂಪೂರ್ಣ ನಾಶವಾಗಿದ್ದು, ಕೂದಲು ಸರಿ ಮಾಡಿಕೊಂಡು ಓಡಾಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕನ್ನಡ ಹಾಕಿಕೊಂಡು ತಿರುಗುವ ಶಾಸಕರಿಗೆ ರೈತರ ಕಷ್ಟ ಗೊತ್ತಾಗುತ್ತಿಲ್ಲವೇ? ಎಂದು ಪ್ರಶ್ನಿಸಿ, 60 ವರ್ಷದ ಮುಳುಗಡೆ ಸಮಸ್ಯೆ ಕುರಿತು ಹಾಲಪ್ಪ ಸಗಣಿ ತಿನ್ನುತ್ತಿದ್ದರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನೆ ಮಾಡಿದ್ದರು. ಕಳೆದ ಮೂರು ತಿಂಗಳಿನಿಂದ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರೇ ನೀವು ಏನು ತಿನ್ನುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ವಿದ್ಯುತ್ ಸಚಿವರಿಗೆ ಖಾತೆ ಕುರಿತು ಮಾಹಿತಿಯೇ ಇಲ್ಲ. ಭ್ರಷ್ಟಾಚಾರದ ಹಣದಲ್ಲಿ ಕೂರ್ಗ್‌ನಲ್ಲಿ ಸಾವಿರಾರು ಎಕರೆ ತೋಟ ಖರೀದಿ ಮಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಒಂದು ದಿನವೂ ತೋಟ ಓಡಾಡಿದ ಅನುಭವ ಹೊಂದಿಲ್ಲ. ಹಿಂದೆ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ ಅಂತಹವರು ಮಳೆ ಕೊರತೆ, ಡ್ಯಾಂಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದ ಸಂದರ್ಭದಲ್ಲಿಯೂ ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿದ್ದರು. ಆದರೆ ಈಗಿನ ಸಚಿವರಿಗೆ ವಿದ್ಯುತ್ ನಿರ್ವಹಣೆ ಬಗ್ಗೆಯೇ ಗಮನ ಇಲ್ಲ ಎಂದು ದೂರಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಶಾಸಕನಾಗಿದ್ದಾಗ, ಎಂಎಸ್‌ಐಎಲ್ ಅಧ್ಯಕ್ಷನಾಗಿದ್ದಾಗ ಏನೇನು ಅಭಿವೃದ್ಧಿ ಮಾಡಿದ್ದೇನೆ, ಅನುದಾನ ಎಷ್ಟು ತಂದಿದ್ದೇನೆ ಎಂದು ಅಂಕಿ-ಅಂಶಗಳ ವಿವರ ಇದೆ. ನೀವು ಶಾಸಕರಾಗಿ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಎಷ್ಟು ಅನುದಾನ ನಿಮ್ಮ ನಿಗಮದಿಂದ ತಂದಿದ್ದೀರಿ ಎಂದು ಲೆಕ್ಕಕೊಡಿ. ಸೋತವರೆಲ್ಲಾ ಪಾಪಿಗಳು ಎನ್ನುವ ನಿಮ್ಮ ಮಾತು ನಿಜವಾದರೆ ನಿಮ್ಮನ್ನು ಸೇರಿಸಿ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ, ಯಡಿಯೂರಪ್ಪ ಹೀಗೆ ಅನೇಕರು ಸೋಲು ಅನುಭವಿಸಿದ್ದಾರೆ. ಅವರು ಪಾಪಿಗಳಾ ಎನ್ನುವುದನ್ನು ಜನರ ಪ್ರಶ್ನೆಗೆ ಉತ್ತರಿಸಿ. ಮುಂದಿನ ನಾಲ್ಕೈದು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದೆ ಹೋದಲ್ಲಿ ಕಚೇರಿಗೆ ಬೀಗ ಜಡಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಗಂಭೀರವಾದ ವಿದ್ಯುತ್ ಸಮಸ್ಯೆಯಿದ್ದು ರೈತರು ತಮ್ಮ ಜಮೀನಿಗೆ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲಾಗದೆ ಫಸಲು ಕಳೆದುಕೊಳ್ಳುತ್ತಿದ್ದಾರೆ. ಶಾಸಕರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸೆಲೆಬ್ರಿಟಿಗಳನ್ನು ಕರೆಸಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಮ್ಮನಘಟ್ಟ ದೇವಸ್ಥಾನಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಹಣವನ್ನು ತಡೆಹಿಡಿದು ದೈವದ್ರೋಹ ಮಾಡಿದ್ದಾರೆ. ಆದರೂ ದೇವಸ್ಥಾನ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳಿನೊಳಗೆ ದೇವಸ್ಥಾನ ಲೋಕಾರ್ಪಣೆ ನಡೆಯಲಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಶಾಸಕರಿಗೆ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಇರಾದೆ ಇಲ್ಲ. ಅವರು ಯಾವ ಅಧಿಕಾರಿ ಬಂದು ಎಷ್ಟು ವರ್ಷವಾಗಿದೆ, ಎಲ್ಲಿಗೆ ವರ್ಗಾಯಿಸಬೇಕು ಎನ್ನುವ ಚಿಂತೆಯಲ್ಲಿದ್ದಾರೆ. ಗ್ರಾಮಾಂತರ ಪ್ರದೇಶಕ್ಕೆ ಕನಿಷ್ಠ ತಾಸು ತ್ರಿಪೇಸ್ ವಿದ್ಯುತ್ ನೀಡಬೇಕು. ಆದರೆ ಮೂರು ತಾಸು ಸಹ ವಿದ್ಯುತ್ ಕೊಡುತ್ತಿಲ್ಲ. ರೈತರ ಸಂಕಷ್ಟ ನಿವಾರಿಸಲು ಶಾಸಕರ ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1DiDy9VRnZ/
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಯೋಜನಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿದರು. ದೇವೇಂದ್ರಪ್ಪ ಯಲಕುಂದ್ಲಿ, ಗಣೇಶಪ್ರಸಾದ್, ಮೈತ್ರಿ ಪಾಟೀಲ್, ಸವಿತಾ ವಾಸು, ಮಧುರಾ ಶಿವಾನಂದ್, ಪ್ರೇಮ ಸಿಂಗ್, ಸುಮ ರವಿ, ವಿನೋದ್ ರಾಜ್, ಹರೀಶ್ ಮೂಡಳ್ಳಿ, ಅರುಣ ಕುಗ್ವೆ, ವಿ.ಮಹೇಶ್, ನಟರಾಜ ಗೇರುಬೀಸು, ಗಣಪತಿ ಇರುವಕ್ಕಿ, ಬಿ.ಸಿ.ಲಕ್ಷ್ಮೀನಾರಾಯಣ, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಇಸಾಕ್ ಇನ್ನಿತರರು ಹಾಜರಿದ್ದರು.