ಶಿವಮೊಗ್ಗ ; ಇಲ್ಲಿನ ರಾಮೇನಕೊಪ್ಪ ಪ್ರದೇಶದಲ್ಲಿ ಸೀಗೆಹಟ್ಟಿ ನಿವಾಸಿ ಕುಳ್ಳಿ ಕಿರಣ್ (32) ಎಂಬ ಯುವಕನನ್ನು ಮಾರಕಾರಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ನಿಖಿಲ್ ಬಿ. ಖಚಿತಪಡಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವೈಯಕ್ತಿಕ ಹಣಕಾಸಿನ ವಿವಾದ ಹಾಗೂ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ದುಷ್ಕರ್ಮಿಗಳು ಕಿರಣ್ ಎದೆಗೆ ಮಾರಕಾಸ್ತ್ರಗಳಿಂದ ಎರಡು ಬಾರಿ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಈ ಭೀಕರ ಹತ್ಯೆಯಲ್ಲಿ ಇಬ್ಬರು ಅಥವಾ ಮೂವರು ಭಾಗಿಯಾಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದು ಗುಂಪುಗಾರಿಕೆ ಅಥವಾ ‘ಗ್ಯಾಂಗ್ ವಾರ್’ ಹಿನ್ನೆಲೆಯಲ್ಲಿ ನಡೆದ ಕೊಲೆಯೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಸದ್ಯ ತನಿಖೆ ಚುರುಕುಗೊಂಡಿದ್ದು, ಹಂತಕರ ಪತ್ತೆಯಾದ ನಂತರ ಹಾಗೂ ಹಣಕಾಸಿನ ವ್ಯವಹಾರದ ಸಂಪೂರ್ಣ ವಿವರ ಲಭ್ಯವಾದ ಬಳಿಕವಷ್ಟೇ ನಿಖರ ಮಾಹಿತಿ ಹೊರಬರಬೇಕಿದೆ. ಒಂದು ವೇಳೆ ಗ್ಯಾಂಗ್ ವಾರ್ ಬಗ್ಗೆ ಸಾಕ್ಷ್ಯಗಳು ದೊರೆತರೆ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಎಸ್ಪಿ ನಿಖಿಲ್ ಸ್ಪಷ್ಟಪಡಿಸಿದ್ದಾರೆ.

