ಶಿವಮೊಗ್ಗ: ಮನೆಯಲ್ಲಿ ಬಟ್ಟೆಗೆ ಇಸ್ತ್ರಿ (ಐರನ್) ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ವಾದಿ-ಎ-ಹುದಾ ಬಡಾವಣೆಯಲ್ಲಿ ಅ.26 ರಂದು ಸಂಭವಿಸಿದೆ.
ಮೃತ ದುರ್ದೈವಿ ಬಾಲಕನನ್ನು 14 ವರ್ಷದ ಉಮರ್ ಫಾರೂಕ್ ಎಂದು ಗುರುತಿಸಲಾಗಿದ್ದು, ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಮನೆಯಲ್ಲಿ ಬಟ್ಟೆಗೆ ಐರನ್ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಶಾಕ್ ತಗುಲಿ ಬಾಲಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ಕೂಡಲೇ ಗಾಬರಿಗೊಂಡ ಪೋಷಕರು ಆತನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತುಂಗಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

