ಶಿವಮೊಗ್ಗ

ಶಿವಮೊಗ್ಗದಲ್ಲಿ 13.54 ಲಕ್ಷ ಮತದಾರರು ಫೈನಲ್! ಪಟ್ಟಿಯಿಂದ 1.88 ಲಕ್ಷ ಮಂದಿ ಔಟ್: ಇಲ್ಲಿದೆ ನಿಮ್ಮ ಕ್ಷೇತ್ರದ ಕಂಪ್ಲೀಟ್ ಡೀಟೇಲ್ಸ್

ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಿವಮೊಗ್ಗ ಜಿಲ್ಲಾಡಳಿತವು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

Shivamogga DC

ಶಿವಮೊಗ್ಗ: ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಿವಮೊಗ್ಗ ಜಿಲ್ಲಾಡಳಿತವು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ ಒಟ್ಟು 13,54,046 ಸಾಮಾನ್ಯ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಪರಿಷ್ಕರಣೆಗೂ ಮೊದಲು ಜಿಲ್ಲೆಯಲ್ಲಿ 15,19,459 ಮತದಾರರಿದ್ದರು. ಪರಿಷ್ಕರಣೆಯ ವೇಳೆ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ವಿಳಾಸದಲ್ಲಿ ಲಭ್ಯವಿಲ್ಲದವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರನ್ನು ಗುರುತಿಸಿ 1,88,554 ಹೆಸರುಗಳನ್ನು ಕೈಬಿಡಲಾಗಿತ್ತು. ಬಳಿಕ 2026ರ ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ 13,30,905 ಮತದಾರರಿದ್ದರು. ಆನಂತರ ನಡೆದ ಪರಿಶೀಲನೆ ಹಾಗೂ ಹೊಸ ಸೇರ್ಪಡೆಯಿಂದಾಗಿ ಕರಡು ಪಟ್ಟಿಗಿಂತ ಅಂತಿಮ ಪಟ್ಟಿಯಲ್ಲಿ 23,141 ಮತದಾರರ ಸಂಖ್ಯೆ ಏರಿಕೆಯಾಗಿದೆ ಎಂದು ವಿವರಿಸಿದರು.

ಅಂತಿಮ ಮತದಾರರ ಪಟ್ಟಿಯ ಪ್ರಮುಖ ಅಂಶಗಳು:

  • ಪುರುಷ ಮತದಾರರು: 6,67,100
  • ಮಹಿಳಾ ಮತದಾರರು: 6,86,921
  • ತೃತೀಯ ಲಿಂಗಿಗಳು: 25
  • ಸೇವಾ ಮತದಾರರು (Service Voters): 648
  • ಹೊಸ ಯುವ ಮತದಾರರು (18–19 ವರ್ಷ): 19,510 ಮಂದಿ ಸೇರ್ಪಡೆ.

ಕ್ಷೇತ್ರವಾರು ಮತದಾರರ ವಿವರ:

  • ಶಿವಮೊಗ್ಗ ನಗರ: 2,24,699
  • ಶಿವಮೊಗ್ಗ ಗ್ರಾಮಾಂತರ: 2,04,780
  • ಸಾಗರ: 1,94,260
  • ಶಿಕಾರಿಪುರ: 1,86,279
  • ಸೊರಬ: 1,85,649
  • ತೀರ್ಥಹಳ್ಳಿ: 1,80,115
  • ಭದ್ರಾವತಿ: 1,78,264

ಪರಿಶೀಲನೆ ಹಾಗೂ ಮತಗಟ್ಟೆಗಳ ವ್ಯವಸ್ಥೆ:

ಮತದಾರರ ಮಾಹಿತಿಯಲ್ಲಿನ ವ್ಯತ್ಯಾಸ ಹಾಗೂ ಮ್ಯಾಪಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಒಟ್ಟು 48,660 ನೋಟಿಸ್‌ಗಳನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗಿತ್ತು. ಈ ಪೈಕಿ 612 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ. ಒಂದು ವೇಳೆ ಅರ್ಹರ ಹೆಸರು ಪಟ್ಟಿಯಿಂದ ಕೈಬಿಟ್ಟುಹೋಗಿದ್ದರೆ, ಅಗತ್ಯ ದಾಖಲೆಗಳನ್ನು ನೀಡಿ ಹೆಸರು ಸೇರಿಸಲು ನಿರಂತರ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ತೃತೀಯ ಲಿಂಗಿಗಳ ನೋಂದಣಿ ಸಂಖ್ಯೆ ವಾಸ್ತವಕ್ಕಿಂತ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಅಭಿಯಾನದ ಮೂಲಕ ಅವರನ್ನು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ಸಿದ್ಧತೆಗಾಗಿ ಪ್ರತಿ ಮತಗಟ್ಟೆಗೆ ಗರಿಷ್ಠ 1150ರಿಂದ 1200 ಮತದಾರರ ಮಿತಿ ನಿಗದಿಪಡಿಸಲಾಗಿದ್ದು, ನಗರ ಭಾಗದಲ್ಲಿ 637 ಮತ್ತು ಗ್ರಾಮೀಣ ಭಾಗದಲ್ಲಿ 1249 ಸೇರಿದಂತೆ ಒಟ್ಟು 1886 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮೃತ ಸಿಬ್ಬಂದಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ:

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಮೃತಪಟ್ಟ ಮಹಿಳಾ ಸಿಬ್ಬಂದಿಯೊಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಶೀಘ್ರವೇ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಡಿಸಿ ತಿಳಿಸಿದರು.

ಬರ ನಿರ್ವಹಣೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆ:

ಇದೇ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರವು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟದ ವರದಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅಲ್ಲಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗುವುದು ಎಂದರು.

ಮಳೆ ಕೊರತೆಯಿಂದಾಗಿ ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವವನ್ನು ತಡೆಯಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸನ್ನದ್ಧವಾಗಿದೆ. ಜಲಾಶಯಗಳ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲಾಗಿದೆ. ಕೆರೆ, ಕಟ್ಟೆ ಹಾಗೂ ಕಾಲುವೆಗಳಿಂದ ಅನಧಿಕೃತವಾಗಿ ಪಂಪ್‌ಸೆಟ್ ಮೂಲಕ ನೀರು ಎತ್ತುವುದನ್ನು ತಡೆಯಲು ಕಂದಾಯ, ನೀರಾವರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಮತ್ತು ಅಕ್ರಮ ಪಂಪ್‌ಸೆಟ್ ಅಳವಡಿಕೆ ಕಂಡುಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ಹಾಗೂ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!