ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 97 ರಿಂದ 98 ರಷ್ಟು ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಜನರಿಗೆ ನೇರ ಆರ್ಥಿಕ ನೆರವು ದೊರೆಯುತ್ತಿದೆ. ಈ ಸೌಲಭ್ಯಗಳನ್ನು ಕಟ್ಟಕಡೆಯ ಅರ್ಹ ವ್ಯಕ್ತಿಗೂ ತಲುಪಿಸಲು ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಮೆಹರೋಜ್ ಖಾನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗಳ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಅರ್ಹರಿಗೆ ಯೋಜನೆ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮುಂದಿನ 3-4 ದಿನಗಳೊಳಗೆ ಗ್ರಾ.ಪಂ ಮಟ್ಟದ ಗ್ಯಾರಂಟಿ ಸಮಿತಿಗಳ ರಚನೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಯೋಜನೆಗಳ ಪ್ರಗತಿ ಮತ್ತು ಪ್ರಮುಖ ಸೂಚನೆಗಳು
1. ಗೃಹಲಕ್ಷ್ಮಿ ಯೋಜನೆ:
ಜಿಲ್ಲೆಯ ಅರ್ಹ ಮಹಿಳೆಯರ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಕೋಟ್ಯಂತರ ರೂಪಾಯಿ ತಲುಪಿದೆ.
ವರ್ಷವಾರು ಅನುದಾನ ಬಿಡುಗಡೆ:
- 2023-24ರಲ್ಲಿ ₹584.23 ಕೋಟಿ
- 2024-25ರಲ್ಲಿ ₹768.30 ಕೋಟಿ
- 2025-26ನೇ ಸಾಲಿನಲ್ಲಿ ₹841.13 ಕೋಟಿ
ಹಣ ಮರುಪಾವತಿಗೆ ಕ್ರಮ:
ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ₹73,75,747 ಮೊತ್ತವನ್ನು ಹಿಂಪಡೆಯಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಿಕವರಿ ಮಾಡಲು ಸೂಚಿಸಲಾಯಿತು.

ಪ್ರತಿ ಫಲಾನುಭವಿಯು ಕಡ್ಡಾಯವಾಗಿ ತಮ್ಮ ಹೆಸರಿನಲ್ಲೇ ಸಿಮ್ ಕಾರ್ಡ್ ಹೊಂದಿರಬೇಕು. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳಿಗೆ ಯೋಜನೆ ಸ್ಥಗಿತಗೊಳಿಸುವುದಿಲ್ಲ ಎಂದು ಉಪಾಧ್ಯಕ್ಷರು ಸ್ಪಷ್ಟಪಡಿಸಿದರು.
2. ಶಕ್ತಿ ಯೋಜನೆ ಮತ್ತು ಸಾರಿಗೆ ಸವಾಲುಗಳು:
ಮಹಿಳೆಯರ ಉದ್ಯೋಗ, ಶಿಕ್ಷಣ ಹಾಗೂ ಧಾರ್ಮಿಕ ಪ್ರವಾಸಕ್ಕೆ ಶಕ್ತಿ ಯೋಜನೆ ವರದಾನವಾಗಿದೆ. ಜೂನ್ 2023 ರಿಂದ ಸೆಪ್ಟೆಂಬರ್ 2026 ರವರೆಗೆ ಜಿಲ್ಲೆಯಲ್ಲಿ 8.69 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಕೆಎಸ್‌ಆರ್‌ಟಿಸಿಗೆ ಸರ್ಕಾರದಿಂದ ₹336.18 ಕೋಟಿ ಆದಾಯ ಸಂದಾಯವಾಗಿದೆ.
ಬಸ್ ಕೊರತೆ ಬಗ್ಗೆ ಚರ್ಚೆ:
ಜಿಲ್ಲೆಯಲ್ಲಿ ಪ್ರಸ್ತುತ 401 ಬಸ್‌ಗಳಿವೆ. ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಡಿಪೋಗಳಿಲ್ಲದೆ ಬಸ್ ಕೊರತೆ ಉಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ನವೀನ್ ಸಭೆಗೆ ತಿಳಿಸಿದರು.
ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಮಹಿಳಾ ಕಾರ್ಮಿಕರಿದ್ದು ಖಾಸಗಿ ಬಸ್‌ಗಳ ಪ್ರಾಬಲ್ಯ ಹೆಚ್ಚಿದೆ ಎಂದು ಸದಸ್ಯ ಶಿವಾನಂದ್ ಗಮನ ಸೆಳೆದರು. ತೀರ್ಥಹಳ್ಳಿಯಲ್ಲಿ ಕೊರೊನಾ ಸಮಯದಲ್ಲಿ ನಿಂತುಹೋದ ‘ಸಹಕಾರ ಸಾರಿಗೆ’ಯಿಂದಾಗಿ ಜನರು 10-15 ಕಿ.ಮೀ ನಡೆಯುವಂತಾಗಿದೆ ಹಾಗೂ ಹೊಸನಗರ ಗ್ರಾಮಾಂತರಕ್ಕೆ ಕನಿಷ್ಠ 5 ಹೊಸ ಬಸ್ ನೀಡುವಂತೆ ಸದಸ್ಯರು ಮನವಿ ಮಾಡಿದರು.
ಪರಿಹಾರ ಕ್ರಮ:
ಕೇಂದ್ರದ ಯೋಜನೆಯಡಿ 50 ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಆಗಿದ್ದು, ನಗರ ಸಾರಿಗೆ ಸಮಸ್ಯೆ ಶೀಘ್ರ ಬಗೆಹರಿಯಲಿದೆ. 15 ವರ್ಷ ಮೀರಿದ 85 ಬಸ್‌ಗಳನ್ನು ಗುಜರಿಗೆ ಹಾಕಲಾಗಿದ್ದು, 65 ಹೊಸ ಮಾರ್ಗಗಳಿಗೆ ಬೇಡಿಕೆ ಬಂದಿದೆ ಎಂದು ಡಿಸಿ ನವೀನ್ ವಿವರಿಸಿದರು. ಜಿಲ್ಲೆಯ ಸಾರಿಗೆ ಸಮಸ್ಯೆ ಕುರಿತು ಸಾರಿಗೆ ಸಚಿವರಿಗೆ ಪತ್ರ ಬರೆಯುವುದಾಗಿ ಮೆಹರೋಜ್ ಖಾನ್ ಭರವಸೆ ನೀಡಿದರು.
3. ಅನ್ನಭಾಗ್ಯ ಯೋಜನೆ:
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಆಹಾರ ಧಾನ್ಯ ಮತ್ತು ನಗದು ವಿತರಣೆಗೆ ಜಿಲ್ಲೆಯಲ್ಲಿ ಈವರೆಗೆ ₹360.54 ಕೋಟಿ ವೆಚ್ಚ ಮಾಡಲಾಗಿದೆ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ:
ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಮತ್ತು ದಾಸ್ತಾನು ಮಾಹಿತಿ ಫಲಕ ಹಾಕಬೇಕು. ಕಳಪೆ ರಾಗಿ ವಿತರಣೆ, ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಹಾಗೂ ಗ್ರಾಮೀಣ ಭಾಗದಲ್ಲಿ ಪಡಿತರ ಅಕ್ಕಿ ಕೊಟ್ಟು ದಿನಸಿ ವಸ್ತು ಖರೀದಿಸುವ ಪದ್ಧತಿಗೆ ಕಡಿವಾಣ ಹಾಕಬೇಕು. ಎಲ್ಲಾ ಗೋದಾಮುಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಯಿತು.
ಅಕ್ರಮ ಪಡಿತರ ಸಾಗಾಣಿಕೆ ವಿರುದ್ಧ ಈಗಾಗಲೇ 3 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಸತೀಶ್ ಮಾಹಿತಿ ನೀಡಿದರು.
4. ಗೃಹಜ್ಯೋತಿ ಯೋಜನೆ (ಶೇ. 96 ಸಾಧನೆ):
200 ಯೂನಿಟ್ ಒಳಗೆ ವಿದ್ಯುತ್ ಬಳಸುವ ಜಿಲ್ಲೆಯ 4,73,682 ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಸರ್ಕಾರ ₹82,368.67 ಲಕ್ಷ ವೆಚ್ಚ ಮಾಡಿದೆ. ಬಾಕಿ ಉಳಿದಿರುವ 15,262 ಮನೆಗಳ ಪರಿಶೀಲನೆ ಈ ತಿಂಗಳಾಂತ್ಯಕ್ಕೆ ಮುಗಿಯಲಿದ್ದು, ಸ್ಮಾರ್ಟ್ ಮೀಟರ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
5. ಯುವನಿಧಿ ಮತ್ತು ‘ಯುವನಿಧಿ ಪ್ಲಸ್’:
ಜಿಲ್ಲೆಯ 1,31,395 ಡಿಬಿಟಿ ಖಾತೆಗಳ ಮೂಲಕ ನಿರುದ್ಯೋಗ ಭತ್ಯೆ ನೀಡಲು ಈವರೆಗೆ ₹39.08 ಕೋಟಿ ಖರ್ಚು ಮಾಡಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕೌಶಲ್ಯ ತರಬೇತಿ ನೀಡುವ ‘ಯುವನಿಧಿ ಪ್ಲಸ್’ ಹಾಗೂ ಇತರ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಯಿತು.

ಗೃಹಲಕ್ಷ್ಮಿಯಿಂದ ಸ್ವಾವಲಂಬಿ ಬದುಕು: ಮಹಿಳೆಯರ ಯಶೋಗಾಥೆ
ಸಭೆಯಲ್ಲಿ ಪಾಲ್ಗೊಂಡಿದ್ದ ಫಲಾನುಭವಿ ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ತಮ್ಮ ಬದುಕು ಹಸನಾದ ಬಗೆಯನ್ನು ಹಂಚಿಕೊಂಡರು.
ಬಟ್ಟೆ ವ್ಯಾಪಾರ:
ಮೊದಲು ಇಸ್ತ್ರಿ ಕೆಲಸ ಮಾಡುತ್ತಿದ್ದೆ. ಗೃಹಲಕ್ಷ್ಮಿ ಹಣದಿಂದ ಬಟ್ಟೆ ಮತ್ತು ಸೀರೆ ವ್ಯಾಪಾರ ಆರಂಭಿಸಿ ಲಾಭ ಗಳಿಸುತ್ತಿಸುತ್ತಿದ್ದೇನೆ.
– ಕಲಾವತಿ, ರಿಪ್ಪನ್‌ಪೇಟೆ
ಚಿಕನ್ ಅಂಗಡಿ:
ಕೂಲಿ ಕೆಲಸ ಬಿಟ್ಟು ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಂತ ಚಿಕನ್ ಅಂಗಡಿ ತೆರೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ.
– ಸವಿತಾ, ಉಂಬ್ಳೇಬೈಲು
ಹೈನುಗಾರಿಕೆ:
ಯೋಜನೆಯ ಹಣದಿಂದ ಹಸು ಖರೀದಿಸಿ, ಹುಲ್ಲು ಬೆಳೆದು ಹಾಲು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದೇನೆ.
– ನೀಲಮ್ಮ, ಭದ್ರಾಪುರ
ದಿನಸಿ ಅಂಗಡಿ:
ಅನಿಶ್ಚಿತವಾಗಿದ್ದ ಕಲ್ಲು ಕೋರೆ ಕೆಲಸ ಬಿಟ್ಟು, ಕೂಡಿಟ್ಟ ಹಣದಿಂದ ದಿನಸಿ ಅಂಗಡಿ ಇಟ್ಟು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ.
– ಸವಿತಾ, ಆನಂದಪುರ
ಬುಟ್ಟಿ ಹೆಣೆಯುವ ಕಾಯಕ:
ಗೃಹಲಕ್ಷ್ಮಿ ನೆರವಿನಿಂದ ಬುಟ್ಟಿಗಳನ್ನು ಹೆಣೆದು ಮಾರಾಟ ಮಾಡುತ್ತಾ ಕುಟುಂಬಕ್ಕೆ ನಿರ್ವಹಿಸುತ್ತಿದ್ದೇನೆ.
– ಮಂಜುಳಾಬಾಯಿ, ಗೋವಿಂದಪುರ
ಟೈಲರಿಂಗ್ ಮತ್ತು ವೈದ್ಯಕೀಯ ನೆರವು:
ಬಿಪಿಎಲ್ ಕಾರ್ಡ್‌ನಿಂದ ಪತಿಯ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದು, ಗೃಹಲಕ್ಷ್ಮಿ ಹಣದಲ್ಲಿ ಹೊಲಿಗೆ ಯಂತ್ರ ಖರೀದಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ.
– ರೇಖಾ ಸತೀಶ್, ಸೊರಬ
ತೆಂಗಿನಕಾಯಿ ವ್ಯಾಪಾರ:
ಯೋಜನೆಯ ಹಣದಿಂದ ಸಣ್ಣ ಅಂಗಡಿ ಹಾಗೂ ಕಾಯಿ ವ್ಯಾಪಾರ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ.
– ಫರ್ಜಾನಾ ಖಾನಂ, ತೀರ್ಥಹಳ್ಳಿ
ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಾಧಿಕಾರದ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

