Featured

ರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು?

ರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು? – mpbyr

ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಇಳುವರಿ ಇತ್ತೀಚಿನ ವರ್ಷಗಳಲ್ಲಿ ಕುಸಿತ ಕಂಡಿದ್ದು, ಶೇಕಡಾ 34ರಷ್ಟು ಇಳಿಕೆಯಾಗಿರುವುದು ಆತಂಕಕಾರಿ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ನಗರದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಮಾಮ್‌ಕೋಸ್ ವತಿಯಿಂದ ನಡೆದ 86ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಡಿಕೆ ಬೆಳೆ ಪ್ರದೇಶದಲ್ಲಿ ಕರ್ನಾಟಕದ ಪಾಲು ದೊಡ್ಡದಾಗಿದೆ. ದೇಶದ ಅಡಿಕೆ ವಲಯದಲ್ಲಿ ರಾಜ್ಯವು ಶೇಕಡಾ 71.6ರಷ್ಟು ಪಾಲು ಹೊಂದಿದ್ದು, ಕಳೆದ ಐದು ವರ್ಷಗಳಲ್ಲಿ ಅಡಿಕೆಯಿಂದ ದೇಶದ ಜಿಎಸ್‌ಟಿಗೆ ₹19,220 ಕೋಟಿ ಆದಾಯ ಬಂದಿದೆ. ಅದರಲ್ಲಿ ಸುಮಾರು ಶೇಕಡಾ 75ರಷ್ಟು ಪಾಲು ಕರ್ನಾಟಕದಿಂದಲೇ ಬಂದಿದೆ ಎಂದು ಹೇಳಿದರು.

ಅಡಿಕೆ ಕ್ಷೇತ್ರದಲ್ಲಿ ಕರ್ನಾಟಕ ಇಷ್ಟು ಬಲವಾದ ಸ್ಥಾನದಲ್ಲಿರಲು ರೈತರ ಶ್ರಮವೇ ಪ್ರಮುಖ ಕಾರಣ. ಆದರೆ ಇತ್ತೀಚೆಗೆ ಮಳೆ, ರೋಗಬಾಧೆ, ಹವಾಮಾನ ಬದಲಾವಣೆ ಮತ್ತು ಉತ್ಪಾದನಾ ವೆಚ್ಚದ ಏರಿಕೆ ಮುಂತಾದ ಕಾರಣಗಳಿಂದ ಇಳುವರಿ ಕುಸಿತ ಕಂಡಿದೆ. ರಾಜ್ಯದಲ್ಲಿ ಅಡಿಕೆ ಉತ್ಪಾದನೆಯಲ್ಲಿ ಶೇಕಡಾ 34ರಷ್ಟು ಕುಸಿತವಾಗಿರುವುದು ರೈತರ ಆದಾಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶ ಎಷ್ಟೇ ಅಭಿವೃದ್ಧಿಯಾದರೂ, ವಿಜ್ಞಾನ ಎಷ್ಟೇ ಮುಂದುವರಿದರೂ ರೈತರು ಬೆಳೆ ಬೆಳೆಸದಿದ್ದರೆ ಆಹಾರ ಮತ್ತು ಕೃಷಿ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ರೈತರ ಹಿತ ಕಾಯುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು ಎಂದು ರಾಘವೇಂದ್ರ ಹೇಳಿದರು.

ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಅಡಿಕೆ ತೇವಾಂಶ ಪ್ರಮಾಣವನ್ನು ಶೇಕಡಾ 11ರ ಮಟ್ಟದಲ್ಲಿ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಆ ಮನವಿಗೆ ಸಕಾರಾತ್ಮಕ ಪ್ರತಿಫಲ ಸಿಕ್ಕಿದೆ. ಅಡಿಕೆ ಕೊಯ್ಲಿಗೆ ಬಳಸುವ ಯಂತ್ರಗಳಿಗೆ ಹಿಂದೆ ಸಿಗುತ್ತಿದ್ದ ಸಹಾಯಧನ ಕಡಿಮೆ ಇತ್ತು. ಇದೀಗ ಅಡಿಕೆ ಟೆಲಿಸ್ಕೋಪಿಕ್ ದೋಟಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದರು.

ಮಾಮ್‌ಕೋಸ್ ಸಂಸ್ಥೆಯ ಬಗ್ಗೆ ಮಾತನಾಡಿದ ಅವರು, 1939ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಶತಮಾನೋತ್ಸವದ ಹೊಸ್ತಿಲಿನಲ್ಲಿ ನಿಂತಿದೆ. ಸಂಸ್ಥೆ ಈ ಮಟ್ಟಕ್ಕೆ ಬೆಳೆದು ನಿಂತಿರುವುದಕ್ಕೆ ರೈತರು, ಸದಸ್ಯರು ಮತ್ತು ಸಹಕಾರ ಚಳವಳಿಯ ಪಾತ್ರ ದೊಡ್ಡದು ಎಂದರು.

ಪ್ರತಿ ವರ್ಷ ಸಾಮಾನ್ಯ ಸಭೆ ನಡೆಸುವ ಮೂಲಕ ಸಂಸ್ಥೆಯ ಪ್ರಗತಿ, ಲಾಭ-ನಷ್ಟ, ರೈತರಿಗೆ ದೊರೆಯುವ ಸೌಲಭ್ಯಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ. ಮಾಮ್‌ಕೋಸ್ ಸಂಸ್ಥೆ ಸುಧೀರ್ಘವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ₹6.5 ಕೋಟಿಗೂ ಹೆಚ್ಚು ಲಾಭ ಗಳಿಸಿದೆ. ಕಳೆದ 25 ವರ್ಷಗಳಿಂದ ಆಡಿಟ್‌ನಲ್ಲಿ ‘ಎ’ ಗ್ರೇಡ್ ಪಡೆಯುತ್ತಿರುವುದು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಮಾಮ್‌ಕೋಸ್ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಗುಂಪು ವಿಮೆ ಯೋಜನೆಯಡಿ 2025-26ನೇ ಸಾಲಿನಲ್ಲಿ 15,501 ಸದಸ್ಯರು, 15,557 ಕೂಲಿ ಕಾರ್ಮಿಕರು ಮತ್ತು 344 ಕುಟುಂಬ ಸದಸ್ಯರು ಸೇರಿ ಒಟ್ಟು 31,402 ಮಂದಿ ನೋಂದಾಯಿತರಾಗಿದ್ದಾರೆ ಎಂದು ತಿಳಿಸಿದರು.

ಸದಸ್ಯರ ಹಿತದೃಷ್ಟಿಯಿಂದ ಗುಂಪು ವಿಮಾ ಅಭಿರಕ್ಷೆ ಯೋಜನೆಯಡಿ 70 ವರ್ಷದೊಳಗಿನ ಸದಸ್ಯರು ಅಥವಾ ಅವರ ಅವಲಂಬಿತ ಕೂಲಿ ಕಾರ್ಮಿಕರು ಮೃತಪಟ್ಟರೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚದ ಮಿತಿಯನ್ನು ₹1.50 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಮಲೆನಾಡು ಭಾಗದ ಕೆಲವೆಡೆ ರೋಗಬಾಧೆಯಿಂದ ಅಡಿಕೆ ಫಸಲು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ವ್ಯವಹಾರದಲ್ಲಿ ಕಾಳುಮೆಣಸನ್ನೂ ಪರಿಗಣಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ 550 ಕ್ವಿಂಟಾಲ್ ಕಾಳುಮೆಣಸು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇ-ಟೆಂಡರ್ ಮೂಲಕ ಮಾರ್ಚ್ 31ರೊಳಗೆ ಸಂಘದಿಂದ 56,971 ಕ್ವಿಂಟಾಲ್ ಅಡಿಕೆ ಹಾಗೂ ನೇರ ಖರೀದಿ ಮೂಲಕ 34,049 ಕ್ವಿಂಟಾಲ್ ಅಡಿಕೆ ಖರೀದಿಸಲಾಗಿದೆ. ಇತರೆ ಸಹಕಾರ ಸಂಘಗಳ ಮೂಲಕವೂ 38,996 ಕ್ವಿಂಟಾಲ್ ಅಡಿಕೆ ಖರೀದಿಯಾಗಿದ್ದು, ಇದೇ ಅವಧಿಯಲ್ಲಿ ಒಟ್ಟು 1,30,216 ಕ್ವಿಂಟಾಲ್ ಅಡಿಕೆ ಮಾರಾಟ ಮಾಡಲಾಗಿದೆ ಎಂದು ವಿವರಿಸಿದರು.

ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ಸೇರಿದಂತೆ ವಿವಿಧ ರೋಗಗಳ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳನ್ನು ತೋಟಗಳಿಗೆ ಕಳುಹಿಸುವ ಯೋಜನೆಯೂ ಕೈಗೊಳ್ಳಲಾಗಿದೆ. ಇದಕ್ಕಾಗಿ ಮಾಮ್‌ಕೋಸ್ ಸೇರಿದಂತೆ ಅಡಿಕೆ ಮಾರಾಟ ಸಹಕಾರ ಸಂಘಗಳ ಸಹಯೋಗದಲ್ಲಿ ಅಡಿಕೆ ಸಹಕಾರ ಮಹಾಮಂಡಳದಿಂದ ಬೆಂಗಳೂರಿನ ‘ಪ್ರಯೋಗ’ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಈ ಸಂಶೋಧನೆಗೆ ಮಾಮ್‌ಕೋಸ್ ಸಂಸ್ಥೆಯಿಂದ ಅಡಿಕೆ ಸಂಶೋಧನಾ ನಿಧಿಯಿಂದ ₹21 ಲಕ್ಷ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ನಿರ್ದೇಶಕರಾದ ಕೀರ್ತಿರಾಜ್ ಕಾನಳ್ಳಿ, ನಂದನ್, ಬಿ.ಸಿ. ನಾಗೇಂದ್ರ, ಕೆ.ಎಂ. ಶ್ರೀನಿವಾಸ್, ಧರ್ಮೇಂದ್ರ, ರತ್ನಾಕರ್, ಪ್ರಸನ್ನ, ವಿರೂಪಾಕ್ಷಪ್ಪ, ಭರ್ಮಪ್ಪ, ಸತೀಶ್, ಟಿ.ಎಲ್. ರಮೇಶ್, ಜಯಶ್ರೀ, ಸಹನಾ ಸುಭಾಷ್, ವೈ.ಎಸ್. ಸುಬ್ರಮಣ್ಯ ಯಡಗೆರೆ, ಶ್ರೀಕಾಂತ್ ಬರುವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

error: Content is protected !!