Featured

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಆ.25ರಂದು ವಿಧಾನಸೌಧ ಚಲೋ: ರೈತ ಸಂಘ ಘೋಷಣೆ

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಆ.25ರಂದು ವಿಧಾನಸೌಧ ಚಲೋ: ರೈತ ಸಂಘ ಘೋಷಣೆ – raitha DSA

ಶಿವಮೊಗ್ಗ: ಬಿಡದಿ ಟೌನ್‌ಶಿಪ್‌ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಆಗಸ್ಟ್ 25ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಭಾಗದ ಸುಮಾರು 7,000 ಎಕರೆ ಕೃಷಿ ಭೂಮಿಯಲ್ಲಿ ಟೌನ್‌ಶಿಪ್‌ ನಿರ್ಮಿಸಲು ಸರ್ಕಾರ ಮುಂದಾಗಿರುವುದು ರೈತರ ಬದುಕಿಗೆ ದೊಡ್ಡ ಹೊಡೆತವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿ ಪ್ರದೇಶದಲ್ಲಿ ಮರಗಿಡಗಳು, ಅಡಿಕೆ, ತೆಂಗು ಸೇರಿದಂತೆ ಕೃಷಿ ಆಧಾರಿತ ಜೀವನ ವ್ಯವಸ್ಥೆ ಇದೆ. ಇಲ್ಲಿ ಅರ್ಧ ಎಕರೆ, ಒಂದು ಎಕರೆ ಜಮೀನಿನ ಮೇಲೆ ಬದುಕು ಕಟ್ಟಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ರೈತರ ಜೀವನಾಧಾರವನ್ನೇ ಕಿತ್ತುಕೊಳ್ಳುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.

ಜಸ್ಟಿಸ್ ಪಿ. ಗೋಪಾಲಗೌಡ ಸಮಿತಿ ನಡೆಸಿದ ಸಾರ್ವಜನಿಕ ವಿಚಾರಣೆಯಲ್ಲಿ ಹೆಚ್ಚಿನ ಜನರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಜನರು ಒಪ್ಪಿಗೆ ನೀಡಿದ್ದಾರೆ ಎಂಬ ರೀತಿಯಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಬಸವರಾಜಪ್ಪ ದೂರಿದರು.

ಬಿಡದಿ ಟೌನ್‌ಶಿಪ್‌ ವಿಚಾರ ರಾಜಕೀಯ ಪಕ್ಷಗಳ ವಿಷಯವಲ್ಲ. ಇದು ರೈತರ ಬದುಕು, ಕೃಷಿ ಭೂಮಿ, ಪರಿಸರ ಮತ್ತು ಸ್ಥಳೀಯ ಜನರ ಹಕ್ಕಿನ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಬೆದರಿಕೆಗಳಿಗೆ ರೈತರು ಹೆದರುವುದಿಲ್ಲ. ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಆದರೂ ಬಿಡದಿ, ಬೈರಮಂಗಲ ಮತ್ತು ಕಂಚನಹಳ್ಳಿ ಭಾಗದ ರೈತರು, ವಿಶೇಷವಾಗಿ ಮಹಿಳೆಯರು ಧೈರ್ಯದಿಂದ ಹೋರಾಟ ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದರು.

ಕಳೆದ ಒಂದೂವರೆ ವರ್ಷದಿಂದ ಬಿಡದಿ ಹೋಬಳಿ ಜನರು ನಿರಂತರವಾಗಿ ಚಳವಳಿ ನಡೆಸುತ್ತಿದ್ದಾರೆ. ರೈತರ ಅಭಿಪ್ರಾಯವನ್ನು ಗೌರವಿಸದೆ ಯೋಜನೆ ಮುಂದುವರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ನಿವೃತ್ತ ನ್ಯಾಯಾಧೀಶರ ಸಮಿತಿ ರಚನೆಗೆ ಅಧಿಕೃತ ಸರ್ಕಾರಿ ಆದೇಶ ತಕ್ಷಣ ಹೊರಬರಬೇಕು. ಆ ಸಮಿತಿಯ ಮುಂದೆ ರೈತರು ತಮ್ಮ ಅಭಿಪ್ರಾಯ ದಾಖಲಿಸಲು ಶೀಘ್ರ ಅವಕಾಶ ಕಲ್ಪಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

ಹೋರಾಟ ನಿರತ ರೈತರ ಮೇಲಿನ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಮುಂದೆ ಅಹಿಂಸಾತ್ಮಕವಾಗಿ ಹೋರಾಟ ನಡೆಸುವ ರೈತರ ವಿರುದ್ಧ ಯಾವುದೇ ಕಾರಣಕ್ಕೂ ಪ್ರಕರಣ ದಾಖಲಿಸಬಾರದು ಎಂದು ಹೆಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!