ಶಿವಮೊಗ್ಗ ; ಬಿಪಿಎಲ್ ಕಾರ್ಡ್ ಪಡೆದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಅವರವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ರಾಜ್ಯದ ಜನರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲು ಆದೇಶ ಹೊರಡಿಸಿ ಸರ್ಕಾರಿ ಶಾಲೆಯನ್ನು ಸಂರಕ್ಷಿಸುವಂತೆ ಹೊಸನಗರ ಜನ ಸಂಗ್ರಾಮ ಪರಿಷತ್ತಿನ ಪುಣಜೆ ಗಿರೀಶ್ ಆಚಾರ್ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಸರ್ಕಾರದ ಪವಿತ್ರವಾದ ಆಸ್ತಿಯಾಗಿರುತ್ತದೆ. ಈ ಆಮೂಲ್ಯವಾದ ಸರ್ಕಾರಿ ಶಾಲೆಗಳನ್ನು ಸಂರಕ್ಷಿಸುವುದು ಸರ್ಕಾರದ ಮುಖ್ಯ ಕರ್ತವ್ಯವಾಗಿರುತ್ತದೆ. ಏಕೆಂದರೆ ಇತ್ತೀಚಿನ ದಿನಮಾನ ಕಾಲದಲ್ಲಿ ವಿದ್ಯಾರ್ಥಿಗಳ ಪೋಷಕರುಗಳು ಆಂಗ್ಲ ಮಾಧ್ಯಮದ ಹುಚ್ಚಾಸೆಯಿಂದ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಂದಿನ ದಿನದಲ್ಲಿ ಮುಚ್ಚುವ ಸಂಭವ ಎದುರಾಗಿದೆ. ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಹಾಗೂ ಸಂರಕ್ಷಿಸಬೇಕಾದರೆ ರಾಜ್ಯದಲ್ಲಿ ಶೇ. 80ರಷ್ಟು ಜನರು ನಾವು ಬಡವರೆಂದು ಬಿಪಿಎಲ್ ಕಾರ್ಡ್ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸರ್ಕಾರ ಬಡತನ ರೇಖೆಯುಳ್ಳಂತಹ ವ್ಯಕ್ತಿಗಳನ್ನು ಗುರುತಿಸಿ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಿದ ನಂತರ ಬಿಪಿಎಲ್ ಕಾರ್ಡ್ ಪಡೆದ ವ್ಯಕ್ತಿಗಳು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಅವರವರ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗೆ ಸೇರಿಸುತ್ತಿರುವುದು ಸತ್ಯವಾದ ಸಂಗತಿಯಾಗಿರುತ್ತದೆ. ಬಿಪಿಎಲ್ ಕಾರ್ಡ್ ಪಡೆದುಕೊಂಡು ಅವರವರ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದುಪ್ಪಟ್ಟು ಹಣ ಖರ್ಚು ಮಾಡಿ ಐಶಾರಾಮಿ ಶಾಲೆಗಳಿಗೆ ಸೇರಿಸುವ ಪೋಷಕರುಗಳು ಹಣ ಬಲಹೀನರಾಗಿರುವುದಿಲ್ಲ. ರಾಜ್ಯದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕಾದೆ ಹಾಗೂ ಸಂರಕ್ಷಿಸಬೇಕಾದರೆ ಸರ್ಕಾರ ಬಿಪಿಎಲ್ ಕಾರ್ಡ್ ಪಡೆದ ವ್ಯಕ್ತಿಗಳು ಅವರವರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು. ಇಲ್ಲವಾದರೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಆದೇಶ ಹೊರಡಿಸಿದಲ್ಲಿ ಸರ್ಕಾರಿ ಶಾಲೆಗಳನ್ನು ಸಂರಕ್ಷಿಸಿದಂತಾಗುತ್ತದೆ. ಹಾಗೂ ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ 08 ಜ್ಞಾನಪೀಠ ಪ್ರಶಸ್ತಿ ವಿಜೇತರ ಆಶಯವನ್ನು ಕಾಪಾಡಿದಂತಾಗುತ್ತದೆ.
ಆದ್ದರಿಂದ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿಯದೇ ಸರ್ಕಾರ ಈ ಅತೀ ಸೂಕ್ಷ್ಮ ಅಂಶಗಳನ್ನು ಪರಿಗಣಿಸುವುದರ ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಶಿಫಾರಸ್ಸು ಮಾಡಿ ಉತ್ತಮ ತರಬೇತಿಯುಳ್ಳ ಶಿಕ್ಷಕರನ್ನು ನೇಮಿಸಿ ಸರ್ಕಾರದ ಪವಿತ್ರವಾದ ಶಾಲೆಗಳನ್ನು ಸಂರಕ್ಷಿಸುವಂತೆ ಗಿರೀಶ್ ಆಚಾರ್ ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.