ಹೊಸನಗರ: ತಾಲೂಕಿನ ಗರ್ತಿಕೆರೆ ಗ್ರಾಮದ ಬಾರ್ ಬಳಿ ವ್ಯಕ್ತಿಯೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮ್ಮಚ್ಚಿ ಗ್ರಾಮದ ಮಧು ಕೆ.ಪಿ. (36) ಎಂಬುವವರು ಹಲ್ಲೆಗೊಳಗಾದವರಾಗಿದ್ದು, ಗರ್ತಿಕೆರೆ ಗ್ರಾಮದ ಪ್ರಶಾಂತ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ಮಧು, ತಮ್ಮ ಸ್ನೇಹಿತರಾದ ಅಭಿಷೇಕ್ ಮತ್ತು ಸೃಜನ್ ಅವರೊಂದಿಗೆ ನ.03 ರಂದು ಸಂಜೆ ಕಮ್ಮಚ್ಚಿ ರಸ್ತೆಯ ಗರ್ತಿಕೆರೆ ಬಾರ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಪ್ರಶಾಂತ, ಮಧುನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದಾಗ ಆರೋಪಿಯು ಮಧು ಮೇಲೆ ಹಲ್ಲೆ ನಡೆಸಿ ಬಲಗಣ್ಣಿನ ಭಾಗಕ್ಕೆ ಹೊಡೆದಿದ್ದಾನೆ. ಬಳಿಕ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಕೊಲೆ ಮಾಡುವ ಉದ್ದೇಶದಿಂದ ಚುಚ್ಚಲು ಮುಂದಾಗಿದ್ದಾನೆ. ತಕ್ಷಣ ಜೊತೆಯಲ್ಲಿದ್ದ ಸ್ನೇಹಿತರು ಆರೋಪಿಯನ್ನು ತಡೆದು ಜಗಳ ಬಿಡಿಸಿದ್ದು, ಮಧು ಪ್ರಾಣಭಯದಿಂದ ಬಾರ್ ಒಳಗೆ ಓಡಿ ರಕ್ಷಣೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಮಧು ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಆರೋಪಿ ವಿರುದ್ಧ BNS ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

