ರಿಪ್ಪನ್‌ಪೇಟೆ ; ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ನಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು.
ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೊಲೀಸ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರವರ ಧರ್ಮ ಅವರಿಗೆ ಶ್ರೇಷ್ಟವಾಗಿದೆ. ಜಾತಿ ಧರ್ಮದ ಬೇಧ ಭಾವನೆ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಬೇರೆ ಬೇರೆ ಧರ್ಮದ ಹಬ್ಬದಲ್ಲಿ ತೊಡಗಿಕೊಳ್ಳುವ ಮೂಲಕ ಭಾವೈಕ್ಯದೊಂದಿಗೆ ಹಬ್ಬವನ್ನು ಸಂಭ್ರಮಿಸಿ ಎಂದು ಹೇಳಿ, ಗಣಪತಿ ಸೇವಾ ಸಮಿತಿಯ ಕಾರ್ಯಕರ್ತರು ಪೆಂಡಾಲ್ ಹತ್ತಿರ ಮತ್ತು ವಿಸರ್ಜನೆ ಮೆರವಣಿಗೆಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹೊರಗಿನಿಂದ ಬಂದಿರುವವರ ಮೇಲೆ ನಿಗಾವಹಿಸಿ ನಮ್ಮ ಇಲಾಖೆಯವರ ಗಮನಕ್ಕೆ ತರುವಂತೆ ಸೂಚಿಸಿ, ಇಲಾಖೆಯ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿ, ಊರಿನ ಹಾಗೂ ಸಮಿತಿಯಲ್ಲಿ ಸಾಕಷ್ಟು ಅನುಭವ ಇರುವವರ ಸಲಹೆಯನ್ನು ಪಡೆದುಕೊಂಡು ಸ್ವಯಂ ಸೇವಕರು ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಇಲಾಖೆಯ ನಿಯಮಗಳನ್ನು ಪಾಲಿಸಿಕೊಂಡು ಆದಷ್ಟು ತಮ್ಮ ಕಾರ್ಯಕರ್ತರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಇರುವಂತೆ ಹೇಳಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಆರ್.ರಾಘವೇಂದ್ರ ಮಾತನಾಡಿ, ಇಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ಮೂಲಭೂತ ಸೌಲಭ್ಯಗಳ ಇಲ್ಲದೆ ಇರುವುದರ ಬಗ್ಗೆ ಜಿಲ್ಲಾ ವರಿಷ್ಟಾಧಿಕಾರಿಗಳ ಗಮನಸೆಳೆದರು.
ಶಾಂತಿ ಸಭೆಯಲ್ಲಿ ಮುಸ್ಲಿಂ ಮುಖಂಡ ಆರ್.ಎ.ಚಾಬುಸಾಬ್, ಧನಲಕ್ಷ್ಮಿ, ಎಂ.ಬಿ.ಮಂಜುನಾಥ, ಜುಮ್ಮಾಮಸೀದಿಯ ಅಧ್ಯಕ್ಷ ಹಸನಬ, ಎಂ.ಸುರೇಶಸಿಂಗ್, ಆಸಿಫ್‌ಭಾಷಾ, ನಿರೂಪ್ ಕುಮಾರ್, ಮಾತನಾಡಿದರು.
ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್, ಪಿಎಸ್‌ಐ ರಾಜುರೆಡ್ಡಿ, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.