ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಖಾತೆ ಜಮೀನಿಗೆ ಬೇಲಿ, ಕ್ರಮಕ್ಕೆ ಆಗ್ರಹ

Written by malnadtimes.com

Published on:

SHIVAMOGGA | ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಖಾತೆ ಜಮೀನಿಗೆ ಬೇಲಿ ಹಾಕಿದ ಅಕ್ರಮ ದಂಧೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ಥ ಪುನರ್‌ವಸತಿ ಹೋರಾಟ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿತು.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ತಾಲ್ಲೂಕು ಕಸಬಾ 1ನೇ ಹೋಬಳಿ ಅಗಸವಳ್ಳಿ ಗ್ರಾಮದ ಸರ್ವೆ ನಂ. 147 ರಲ್ಲಿ ಮುಳುಗಡೆ ಸಂತ್ರಸ್ಥರಿಗಾಗಿ 1148.30 ಎಕರೆಯನ್ನು ಮೀಸಲಿರಿಸಲಾಗಿದೆ. ಇದರಲ್ಲಿ 470 ಎಕರೆ ಕೃಷಿಭೂಮಿಯನ್ನು ಸರ್ಕಾರವು ಬುಲ್ಡೋಜರ್ ಮೂಲಕ ಮಟ್ಟ ಮಾಡಿ ಬೌಂಡರಿ ಗುರುತಿಸಿ ಬ್ಲಾಕ್ ನಂ. 1ರಿಂದ 187ರವರಗೆ ತಲಾ 2ರಿಂದ 3 ಎಕರೆಯಂತೆ ಮುಳುಗಡೆ ಸಂತ್ರಸ್ಥರಿಗೆ ಖಾತೆ ಮಾಡಿ ಹಂಚಲಾಗಿದೆ. ಆದರೆ ಮುಳುಗಡೆ ಸಂತ್ರಸ್ಥತ್ರ ಸ್ವಾಧೀನದಲ್ಲಿರುವ ಕೆಲವು ಪೋಡಿಯಾಗಿರುವಂತಹ ಜಮೀನಿಗೆ ಶಿವಮೊಗ್ಗದ ಅಕ್ರಮ ದಂಧೆಕೋರರು, ಯಾವುದೇ ಖಾತೆ, ಪಹಣಿ, ದಾಖಲೆ ಇಲ್ಲದೆ ಇರುವಂತಹ ಸಂತ್ರಸ್ಥರ ಮೀಸಲು ಜಮೀನಿಗೆ ರಾತ್ರಿ ವೇಳೆಯಲ್ಲಿ ಜಮೀನಿನ ಮಣ್ಣನ್ನು ಜೆಸಿಬಿ ಮೂಲಕ ತೆಗೆದು ಅಕ್ರಮವಾಗಿ ಮಾರಾಟ ಮಾಡಿ, ದಂಧೆ ಮಾಡುತ್ತಿದ್ದಾರೆ ಎಂದು ದೂರಿದರು.

ರಾಗಿಗುಡ್ಡದ ಕೆಲವರು ಗುಂಪುಗಳನ್ನು ಕಟ್ಟಿಕೊಂಡು ಸಂತ್ರಸ್ಥರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ಲೇಔಟ್ ನಿರ್ಮಿಸಿ ಅಕ್ರಮವಾಗಿ ಮಾರಾಟ ಮಾಡಲು ಹೊರಟಿದ್ದಾರೆ. ಸಂತ್ರಸ್ಥರ ಜಮೀನಿಗೆ ಪ್ರವೇಶಿಸದಂತೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ತುಂಗಾನಗರದ ಠಾಣೆಗೆ 30 ಕ್ಕೂ ಹೆಚ್ಚು ದೂರುಗಳಾಗಿದ್ದರೂ ಕೂಡ ಠಾಣೆಗಳೇ ಆಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಆದ್ದರಿಂದ ಸಂತ್ರಸ್ಥರ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ ತಂತಿಬೇಲಿ ಗೇಟ್ ಬೀಗವನ್ನು ತೆರವುಗೊಳಿಸಿ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ಸಂತ್ರಸ್ಥರು ಕೃಷಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕು. ಮಣ್ಣನ್ನು ತೆಗೆದು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಬಾಕಿ ಇರುವ ಸಂತ್ರಸ್ಥರ ಪೋಡಿಗಳನ್ನು ಕಾಲಮಿತಿಯಲ್ಲಿ ವಿಶೇಷ ಆಧ್ಯತೆಯ ಮೇರೆಗೆ ಪೋಡಿ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಅಧ್ಯಕ್ಷ ತಿ.ನಾ.ಶ್ರೀನಿವಾಸ, ಸಾವೇಹಕ್ಲು ಹೋರಾಟ ಸಮಿತಿಯ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಉಮೇಶ್, ಶ್ರೀಕರ, ರಿಪ್ಪನ್‌ಪೇಟೆ ತಿಮ್ಮಪ್ಪ, ವೆಂಕಟೇಶ್, ಟಿ.ಆರ್. ಕೃಷ್ಣಪ್ಪ ಸೇರಿದಂತೆ ಹಲವರಿದ್ದರು.

Leave a Comment