ಸೊರಬ ; ಮಲೆನಾಡಿನ ಧಾರ್ಮಿಕ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಮಹಾರಥೋತ್ಸವ ರೇಣುಕಾ ದೇವಿ ನಿನಾಲ್ಕು ಉಧೋ ಉಧೋ ಎಂಬ ಘೋಷದೊಂದಿಗೆ ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
ಬೆಟ್ಟದ ಮೇಲಿನ ದೇವಾಲಯದಲ್ಲಿರುವ ಶ್ರೀ ರೇಣುಕಾಂಬ ದೇವಿಯ ಉತ್ಸವ ಮೂರ್ತಿಯನ್ನು ತಂದು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಸಾಗರ ಉಪ ವಿಭಾಗಾಧಿಕಾರಿ ಆರ್. ಯತೀಶ್ ಚಾಲನೆ ನೀಡಿದರು. ಭಕ್ತರು ಶ್ರೀದೇವಿಯ ನಾಮ ಸ್ಮರಣೆಯೊಂದಿಗೆ ರಥ ಎಳೆದರು. ರಥಕ್ಕೆ ಕಾಳುಮೆಣಸು, ಉತ್ತುತ್ತಿ, ಬಾಳೆಹಣ್ಣು ಬೀರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಶ್ರೀ ದೇವಿಗೆ ಉಡಿ ಅರ್ಪಿಸಿದರು. ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಚಂದ್ರಗುತ್ತಿಯನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ’ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡುವುದನ್ನು ತಿಳಿಸಿದ್ದಾರೆ. ಕ್ಷೇತ್ರಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಅವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಚಿಂತನೆ ನಡೆಸಲಾಗಿದೆ. 3 ಕೋಟಿ ರೂ., ಅನುದಾನ ಸಹ ಮಂಜೂರಾಗಿದೆ. ಅರಣ್ಯ ಇಲಾಖೆಯ ಸುಪರ್ಧಿಯಲ್ಲಿರುವ ಸುಮಾರು 10 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಗೆ ಪಡೆಯುವ ಮೂಲಕ ಭಕ್ತರಿಗೆ ಉಳಿಯಲು ಯಾತ್ರಿ ನಿವಾಸ, ಸ್ನಾನ ಗೃಹಗಳು ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಂದಿನ ಜಾತ್ರೆ ವೇಳೆಯೊಳಗೆ ರಸ್ತೆಗಳ ಅಗಲೀಕರಣ ಮತ್ತು ಮಳಿಗೆಗಳನ್ನು ನಿರ್ಮಿಸಲಾಗುವುದು. ಕ್ಷೇತ್ರದ ಶಾಸಕನಾಗಿ ಶ್ರೀ ರೇಣುಕಾಂಬ ದೇವಿಯ ಭಕ್ತರ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ಸುಮಾರು 15 ಕೋಟಿ ರೂ., ಅನುದಾನ ಮಂಜೂರು ಪಡೆಯಲಾಗುವುದು ಎಂದು ತಿಳಿಸಿದರು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರೇಣುಕಾಂಬೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ದೀಡ್ ನಮಸ್ಕಾರ ಸಲ್ಲಿಸುವುದು, ಪಡ್ಲಿಗೆ ತುಂಬಿಸುವುದು, ಚೌಲ, ಮಕ್ಕಳಿಗೆ ಕಿವಿ ಚುಚ್ಚಿಸುವುದು ಮುಂತಾದ ಕಾರ್ಯಕ್ರಮ ಮಾಡುವ ಮೂಲಕ ದೇವಿ ಕೃಪೆಗೆ ಪಾತ್ರರಾದರು. ರಥೋತ್ಸವದ ತಾಂತ್ರಿಕ ವಿಧಿವಿಧಾನಗಳನ್ನು ಕಳೆದಿ ರಾಮ್ ಭಟ್ ವಹಿಸಿದ್ದರು, ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಇಲ್ಲಿನ ಪ್ರಧಾನ ಅರ್ಚಕ ಅರವಿಂದ ಭಟ್ ಅವರ ನೇತೃತ್ವದಲ್ಲಿ ಜರುಗಿತು.

ರೈತರು ತಾವು ಬೆಳೆದ ಅಡಿಕೆ, ಬಾಳೆ ಫಸಲನ್ನು ರಥಕ್ಕೆ ಸಮರ್ಪಿಸಿದರು, ಇನ್ನು ಭಕ್ತರು ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುವುದು ವಿಶೇಷವಾಗಿತ್ತು. ಶ್ರೀ ರೇಣುಕಾಂಬ ದೇವಿ ಮಹಾ ರಥೋತ್ಸವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಂದ್ರಗುತ್ತಿ ಗ್ರಾಮಕ್ಕೆ ಆಗಮಿಸಿದ್ದರು. ಹಾವೇರಿ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಶಿವಮೊಗ್ಗ, ಬ್ಯಾಡಗಿ, ರಾಣೆಬೆನ್ನೂರು, ರಾಯಚೂರು, ಚಿತ್ರದುರ್ಗ ಸೇರಿದಂತೆ ಉತ್ತರಕರ್ನಾಟಕ ಮತ್ತು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ತಾಲೂಕಿನ ವಿವಿಧ ಸಂಘ ಸಂಸ್ಥೆಯವರು ಬಂದಂತಹ ಭಕ್ತರಿಗೆ ಕುಡಿಯಲು ನೀರು-ಬೆಲ್ಲ ಸೇವೆ ನೀಡಿದರು. ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರಿಗೆ ಜಾತ್ರೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ್ ಮಂಜುಳಾ ಹೆಗಡಾಳ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಜಿ.ಕೆ. ಪ್ರಮೀಳಾ ಕುಮಾರಿ, ಮಾಜಿ ಸಚಿವ ಹರತಾಳು ಹಾಲಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ, ಗ್ರಾಪಂ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಪಂ ಮಾಜಿ ಸದಸ್ಯರಾದ ಎನ್.ಜಿ. ನಾಗರಾಜ್, ಸುನೀಲ್ ಗೌಡ, ಮುಖಂಡರಾದ ಎಂ.ಡಿ. ಶೇಖರ್, ಪಾಣಿ ರಾಜಪ್ಪ, ದರ್ಶನ್ ಚಿಕ್ಕಮಾಕೊಪ್ಪ, ಪ್ರಶಾಂತ್ ನಾಯ್ಕ್, ಗುರು ಬರದವಳ್ಳಿ ಸೇರಿದಂತೆ ತಾಲೂಕಿನ ಕಂದಾಯ ಇಲಾಖೆ, ರಕ್ಷಣಾ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಚಂದ್ರಗುತ್ತಿ ಗ್ರಾಮವೂ ಸೇರಿದಂತೆ ತಾಲೂಕಿನ ಅನೇಕ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.