ಬಾಳೆಹೊನ್ನೂರು ; ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆವ ಗುರಿ ಮನುಷ್ಯನದಾಗಬೇಕು. ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ ತರುತ್ತದೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮನುಷ್ಯನಿಗೆ ಮುಖ್ಯವಾಗಿವೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ವಸಂತೋತ್ಸವ ಹಾಗೂ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ಪೂಜೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದಿರಬಹುದು. ಆದರೆ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಎರಡಕ್ಕೂ ಇದೆ. ಆಡಿದ ಮಾತು ಬಿಟ್ಟ ಬಾಣ ಕಳೆದುಕೊಂಡ ಸಮಯ-ನಂಬಿಗೆ ಎಂದಿಗೂ ಮರಳಿ ಬರುವುದಿಲ್ಲ. ಅಧರ್ಮ ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಹಿತ ಸರ್ವ ನಾಶವಾಗುತ್ತದೆ. ದೇಹ…ಶುದ್ಧಿ ನುಡಿ ಶುದ್ಧಿ ಮತ್ತು ಮನಶುದ್ಧಿ ಇವುಗಳನ್ನು ಸಾಧಿಸಲು ನೆರವಾಗುವುದೇ ನಿಜವಾದ ಧರ್ಮ. ಕೈ ತುಂಬಾ ಕೆಲಸ ಕಣ್ತುಂಬ ನಿದ್ದೆ ಮನಸ್ಸು ತುಂಬಾ ನೆಮ್ಮದಿ ಹೃದಯ ತುಂಬಾ ಪ್ರೀತಿ ಮತ್ತು ಆರೋಗ್ಯ ಭಾಗ್ಯ ಇರುವಂತಹ ಜನರು ಜಗತ್ತಿನಲ್ಲಿ ನಿಜವಾದ ಶ್ರೀಮಂತರು. ಒಳ್ಳೆಯ ಮನಸ್ಸು ಇದ್ದರೆ ಒಳ್ಳೆ ದಿನ ಖಂಡಿತ ಬಂದೇ ಬರುತ್ತದೆ. ಕಾಯುವ ತಾಳ್ಮೆ ಬೇಕು. ಶ್ರೀ ಪೀಠದಲ್ಲಿ ವಸಂತೋತ್ಸವ ಪೂರೈಸಿ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಪೂಜಾ ಕಾರ್ಯಗಳು ಯಶಸ್ವಿಯಾಗಿ ಜರುಗಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದರು.

ಬಂದ ಎಲ್ಲ ಭಕ್ತರು ಭದ್ರಾ ನದಿಯಲ್ಲಿ ಮಂಗಲ ಸ್ನಾನ ಮಾಡಿ ತೀರ್ಥ ಪ್ರಸಾದ ಸೇವಿಸಿ ಪುನೀತರಾದ ದೃಶ್ಯ ಅಪೂರ್ವವಾಗಿತ್ತು. ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಮಳಲಿಮಠದ ಡಾ|| ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಎಮ್ಮಿಗನೂರು ಮಹಂತ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ರಾಯಚೂರು ಶಾಂತಮಲ್ಲ ಶಿವಾಚಾರ್ಯರು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮೊದಲ್ಗೊಂಡು ಸುಮಾರು 35 ಜನ ವಿವಿಧ ಮಠಾಧೀಶರು ಸುರಗಿ ಸಮಾರಾಧನೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಲಿಂ. ಕೊಂಡಜ್ಜಿ ತೋಟಪ್ಪನವರ ಮಕ್ಕಳಾದ ಹರಿಹರದ ಕೊಂಡಜ್ಜಿ ಪಂಚಾಕ್ಷರಿ ಸಹೋದರರು, ಅಬ್ಬಿಗೇರಿ ಹಿರೇಮಠದ ಶಿಷ್ಯ ಸದ್ಭಕ್ತ ಮಂಡಳಿಯವರು ಅನ್ನ ದಾಸೋಹ ಸೇವೆ ಸಲ್ಲಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.