ಮತದಾನದ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಿ ; ಡಾ|| ಗೋಪಾಲಕೃಷ್ಣ

0 131

ಚಿಕ್ಕಮಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಏಪ್ರಿಲ್ 26 ರಂದು ನಡೆಯಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತೆ ಜಿಲ್ಲಾ ಸ್ವೀಪ್ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ. ಗೋಪಾಲಕೃಷ್ಣ ತಿಳಿಸಿದರು.


ಇಂದು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಆಯೋಜಿಸಿರುವ ಮಾಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತಯಂತ್ರಗಳನ್ನು ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹಾಗೂ ಹಾಸನ ಲೋಕಸಭಾ ಕ್ಷೇತ್ರ ಜಿಲ್ಲೆಯ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ವಿವಿಧ ಬಗೆಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿರುವುದಾಗಿ ತಿಳಿಸಿದರು.
  

ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿದ್ದು ಕುಡಿಯುವ ನೀರಿನ ವ್ಯವಸ್ಥೆ, ತಾಪಮಾನ ಹೆಚ್ಚಿರುವುದರಿಂದ ಒಆರ್‌ಎಸ್ ಪ್ಯಾಕೆಟ್, ತಂಪು ಬಟ್ಟೆ ಮುಂತಾದವುಗಳ ಜೊತೆಗೆ ಆರೋಗ್ಯ ಕಿಟ್‌ನ್ನು ಒದಗಿಸಲಾಗಿದೆ ಎಂದರು.
  

ಪ್ರತಿ ವಿಧಾನಸಭಾ ಕ್ಷೇತ್ರವಾರು ಸುಸಜ್ಜಿತವಾದ ಮತಗಟ್ಟೆಗಳನ್ನು ಸ್ಥಾಪಿಸಿದ್ದು ಸಖಿ ಮತಗಟ್ಟೆ, ಕಾಫಿ ನಾಡಿನ ವೈಶಿಷ್ಟ್ಯ ಸಾರುವ ಮತಗಟ್ಟೆ, ಅಂಗವಿಕಲರಿಗೆ ವಿಶೇಷ ಮತಗಟ್ಟೆ ಸ್ಥಾಪನೆ ಸೇರಿದಂತೆ ಈ ರೀತಿ ಹತ್ತು ಹಲವಾರು ವಿಭಿನ್ನತೆಗಳಿಂದ ಕೂಡಿರುವ ಮತಗಟ್ಟೆಗಳ ಮೂಲಕ ಮತದಾರರ ಸೆಳೆಯುವ ಕೆಲಸ ಮಾಡಿರುವುದಾಗಿ ತಿಳಿಸಿದರು.
  

ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಮತಗಟ್ಟೆ ಅಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದ ತಕ್ಷಣ ಪರ್ಯಾಯವಾಗಿ ಇವಿಎಂ ಮತಯಂತ್ರ ನೀಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.

Leave A Reply

Your email address will not be published.

error: Content is protected !!