ಮೆಲುಕು ಹಾಕುವುದು ವರ ; ಚಟ್ನಳ್ಳಿ ಮಹೇಶ್

0 34


ಚಿಕ್ಕಮಗಳೂರು : ಜಾನುವಾರಗಳಿಗೆ ಮೇವು ಮೆಲುಕು ಹಾಕುವುದು ವರವಾದರೆ, ಮನುಷ್ಯರಿಗೆ ವಿಚಾರ ಮೆಲುಕು ಹಾಕುವುದು ವರ ಎಂದು ಅಭಾಸಪ ನಿಕಟಪೂರ್ವ ಜಿಲ್ಲಾಧ್ಯಕ್ಷ, ವಾಗ್ಮಿ ಚಟ್ನಳ್ಳಿ ಮಹೇಶ್ ನುಡಿದರು.


ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದೊಂದಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆ ‘ಮುತ್ತಿನಂತ ಮಾತು’ ಅಭಿಯಾನದ ಅಂಗವಾಗಿ ಕೋಟೆಯ ಕ್ರೈಸ್ಟ್ಕಿಂಗ್ ಪ್ರೌಢಶಾಲೆಯಲ್ಲಿ ನಿನ್ನೆ ಅವರು ‘ಮನಸ್ಸಿದ್ದರೆ ಮಾರ್ಗ’ ಕುರಿತಂತೆ ಸಂವಾದಿಸಿ ಉಪನ್ಯಾಸ ನೀಡಿದರು.


ಮೆಲುಕುಹಾಕುವ ಕ್ರಿಯೆಯೆ ಅದ್ಭುತ. ಹಸು, ಕರು, ಎಮ್ಮೆ, ಎತ್ತು ಮತ್ತಿತರ ಜಾನುವಾರಗಳು ಅವಸರದಲ್ಲಿ ತಿಂದ ಮೇವನ್ನು ನಿಧಾನವಾಗಿ ಬಾಯಿಗೆ ತಂದುಕೊಂಡು ಚೆನ್ನಾಗಿ ಜಗಿದು ಮೆಲುಕುಹಾಕಿ ಸರಿಯಾಗಿ ಜೀರ್ಣ ಮಾಡಿಕೊಳ್ಳುತ್ತವೆ. ಮೆಲುಕುಹಾಕುವ ಪ್ರಾಣಿಗಳು ಆರೋಗ್ಯ ಪೂರ್ಣವಾಗಿರುತ್ತವೆ. ಮನುಷ್ಯನು ವಿಚಾರವನ್ನು ಮೆಲುಕು ಹಾಕುವ ಅಭ್ಯಾಸ ಹೊಂದಿದ್ದರೆ ಉತ್ತಮ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ವಿದ್ಯಾರ್ಥಿಗಳೂ ಸಹ ಶಾಲೆಯಲ್ಲಿ ಕಲಿತ ಪಾಠ ಪ್ರವಚನಗಳನ್ನು ಮನೆಯಲ್ಲಿ ಮೆಲುಕು ಹಾಕಿದರೆ ಕೇಳಿತಿಳಿದದ್ದು ಹೆಚ್ಚುಕಾಲ ಉಳಿಯುತ್ತದೆ ಎಂದು ಮಹೇಶ್ ನುಡಿದರು.


ಪ್ರಾಣಿ ಪ್ರಪಂಚದಲ್ಲಿ ಮನುಷ್ಯ ಶ್ರೇಷ್ಠ ಪ್ರಾಣಿ ಎನಿಸಿಕೊಳ್ಳುತ್ತಾನೆ. ವಿಚಾರ ಮಾಡುವ ‘ಮನಸ್ಸು’ ಅದನ್ನು ಸಮರ್ಥವಾಗಿ ಹೊರಗಿಡುವ ‘ಮಾತು’ ಜೊತೆಗೆ ‘ನಗು’ ಮನುಷ್ಯನಿಗಷ್ಟೆ ಸೀಮಿತವಾದದ್ದು. ಇವೇ ಶ್ರೇಷ್ಠತೆಯನ್ನು ತಂದು ಕೊಡುತ್ತದೆ. ಆಲೋಚನೆ-ಕ್ರಿಯೆ-ಮಾತು ಒಳ್ಳೆಯದಿದ್ದರೆ ಏನನ್ನಾದರೂ ಸಾಧಿಸಬಹುದು. ಇದಕ್ಕಾಗಿಯೆ ಮನಸ್ಸಿದ್ದರೆ ಮಾರ್ಗ ಎಂಬ ನಾಣ್ನುಡಿ ನಿರ್ಮಾಣಗೊಂಡಿದೆ. ಮನಸ್ಸಿನಂತೆ ಮಹಾದೇವ ಎಂಬ ಮಾತೂ ಚಲಾವಣೆಯಲ್ಲಿದೆ ಎಂದರು.


ಮನಸ್ಸು ಸೂಕ್ಷ್ಮ ಸಂವೇದಿ. ಮನಸ್ಸನ್ನು ತಿದ್ದುವ ಕರ‍್ಯ ವಚನಕಾರರಿಂದ ಹಿಡಿದು ಈವರೆಗೂ ನಿರಂತರವಾಗಿ ನಡೆದುಕೊಂಡೆ ಬಂದಿದೆ. ಮಾತು ನಿಸರ್ಗದ ಬಹುದೊಡ್ಡ ಆಸ್ತಿ. ಮಾತಿಗೂ ಹದ, ಲಯ ಇರುತ್ತದೆ. ಇವು ತಪ್ಪಿದರೆ ಅನರ್ಥ. ಬದುಕು-ಸಂಸಾರ ಎಲ್ಲಕ್ಕೂ ಹದವಾದ ಮಾತು ಬೇಕು. ಹುಟ್ಟುವಾಗ ಎಲ್ಲರೂ ದೇವ ಮಾನವರೆ. ಬೆಳೆ ಬೆಳೆಯುತ್ತಾ ಪರಿಸರವೇ ಕೆಡುಕನ್ನು ಪರಿಚಯಿಸುತ್ತದೆ. ಸದ್ಭಾವದ ಬೀಜ ಬಿತ್ತಿದರೆ ಒಳ್ಳೆಯ ಸಮಾಜ ನಮ್ಮದಾಗುತ್ತದೆ. ಸಮಾಜಕ್ಕೆ ಸದ್ವಿಚಾರಗಳನ್ನು ಪರಿಚಯಿಸುವ ಕೆಲಸ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಯದಾಗಿರುತ್ತದೆ ಎಂದರು.


ಕಲಿಕೆಯ ಆಧಾರದಮೇಲೆ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮನಸ್ಸನ್ನು ಶುದ್ಧವಾಗಿ ಇರಿಸಿಕೊಂಡಾಗ ಒಳ್ಳೆಯತನ ಸಹಜವಾಗಿಯೆ ಮೈಗೂಡುತ್ತದೆ. ಒಳ್ಳೆಯ ಸಂಕಲ್ಪ ಈಡೇರುತ್ತದೆ. ಶುದ್ಧ ಮನಸ್ಸಿನಿಂದ ಯೋಜಿಸಿ ಕ್ರಿಯಾಶೀಲರಾದರೆ ಹಾದಿ ತಾನಾಗೆ ತೆರೆದುಕೊಳ್ಳುತ್ತದೆ ಎಂದ ಚಟ್ನಳ್ಳಿಮಹೇಶ್, ನಿಸರ್ಗದಿಂದ ನಾವೆಲ್ಲಾ ಪಾಠ ಕಲಿಯಬೇಕು ಎಂದರು. ಕ್ರೈಸ್ಟ್ಕಿಂಗ್‌ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಶ್ರೀನಿವಾಸ ಸಮಾರಂಭ ಉದ್ಘಾಟಿಸಿದರು. ಕಲ್ಕಟ್ಟೆಪುಸ್ತಕ ಮನೆಯ ಎಚ್.ಎಂ.ನಾಗರಾಜರಾವ್ ಭಾವಗೀತೆ ಹಾಡಿದರು.

ಜಿ.ಪಂ.ಮಾಜಿಅಧ್ಯಕ್ಷ ಅಜ್ಜಂಪುರದ ಎ.ಸಿ.ಚಂದ್ರಪ್ಪ ಮುಖ್ಯಅತಿಥಿಗಳಾಗಿದ್ದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾಪಿಸಿದರು. ಶಾಲಾಮುಖ್ಯಶಿಕ್ಷಕಿ ಚಂದ್ರಪ್ರಭ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಬಿ.ಎಂ.ಸುಮಾ ನಿರೂಪಿಸಿದ್ದು, ವೈಷ್ಣವಿ ವಂದಿಸಿದರು.

Leave A Reply

Your email address will not be published.

error: Content is protected !!